November 21, 2026
Saturday, November 21, 2026
spot_img

ನ. 22ರಿಂದ ಬಾಗಲಕೋಟೆಯಲ್ಲಿ ‘ನಿದ್ದೆಗೆಡಿಸ್ಯಾಳ ಬಸಲಿಂಗಿ’ ನಾಟಕ ಪ್ರದರ್ಶನ ಆರಂಭ

ಹೊಸದಿಗಂತ ವರದಿ ಬಾಗಲಕೋಟೆ:

“ವೃತ್ತಿ ರಂಗಭೂಮಿಗಳು ಇಂದಿಗೂ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಕೆಲಸ ಮಾಡುತ್ತಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ 25 ನಾಟಕ ಕಂಪನಿಗಳು ನೋಂದಣಿಯಾಗಿದ್ದರೂ, ನಿಜವಾಗಿಯೂ ರಂಗಭೂಮಿಗಾಗಿ ಶ್ರಮಿಸುತ್ತಿರುವುದು ಕೇವಲ 12 ಕಂಪನಿಗಳು ಮಾತ್ರ. ಆದ್ದರಿಂದ ಸರ್ಕಾರ ನಿಯತ್ತಾಗಿ ರಂಗಭೂಮಿ ಸೇವೆ ಸಲ್ಲಿಸುತ್ತಿರುವ ಕಲಾವಿದರು ಹಾಗೂ ನೈಜ ನಾಟಕ ಕಂಪನಿಗಳನ್ನು ಗುರುತಿಸಿ ಅನುದಾನ ನೀಡಬೇಕು” ಎಂದು ದಾವಣಗೆರೆಯ ಚಿಂದೋಡಿ ನಾಟಕ ಕಂಪನಿಯ ವ್ಯವಸ್ಥಾಪಕ ಚಿಂದೋಡಿ ಶಂಭುಲಿಂಗಪ್ಪ ಆಗ್ರಹಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “1928ರಲ್ಲಿ ಚಿಂದೋಡಿ ಈರಪ್ಪ ಅವರಿಂದ ಆರಂಭವಾದ ನಮ್ಮ ಕಂಪನಿ ನಾಲ್ಕು ತಲೆಮಾರುಗಳಿಂದ ನಿರಂತರವಾಗಿ ರಂಗಭೂಮಿ ಸೇವೆ ಸಲ್ಲಿಸುತ್ತಿದೆ. ಇಂದಿನ ದಿನಗಳಲ್ಲಿ ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ರಂಗಭೂಮಿಯ ಮೌಲ್ಯಗಳು ಕುಸಿಯುವ ಆತಂಕ ಎದುರಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ವೃತ್ತಿ ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ” ಎಂದರು.

ಅನುದಾನ ತಾರತಮ್ಯ ಬೇಡ, ಹಿರಿಯ ಕಲಾವಿದರಿಗೆ ಪಿಂಚಣಿ ನೀಡಿ:

“ಸರ್ಕಾರ ವಾರ್ಷಿಕವಾಗಿ ‘ಎ’ ಗ್ರೇಡ್ ಕಂಪನಿಗೆ 10 ರಿಂದ 12 ಲಕ್ಷ ರೂ., ‘ಬಿ’ ಗ್ರೇಡ್‌ಗೆ 8 ರಿಂದ 10 ಲಕ್ಷ ರೂ. ಹಾಗೂ ‘ಸಿ’ ಗ್ರೇಡ್‌ಗೆ 5 ಲಕ್ಷ ರೂ. ಅನುದಾನ ನೀಡುತ್ತಿದೆ. ಆದರೆ, ಪದವಿ (ಡಿಗ್ರಿ) ಪಡೆದವರಿಗೆ ಮಾತ್ರ ಪ್ರೋತ್ಸಾಹ ನೀಡುವ ಧೋರಣೆ ಸರಿಯಲ್ಲ. ರಂಗಭೂಮಿಯಲ್ಲಿ ಎಲ್‌ಕೆಜಿ ಓದಿದವರಿಂದ ಹಿಡಿದು ಎಲ್ಲಾ ವರ್ಗದ ಕಲಾವಿದರು ಶ್ರಮಿಸುತ್ತಿದ್ದಾರೆ. ಕಲಾವಿದರ ವಿದ್ಯಾರ್ಹತೆಗಿಂತ ಅವರ ಕಲಾ ಸೇವೆಯನ್ನು ಪರಿಗಣಿಸಿ ಅನುದಾನ ಹಾಗೂ ಮಾಶಾಸನ ನೀಡಬೇಕು. ಅದರಲ್ಲೂ ವಯಸ್ಸಾದ ಹಿರಿಯ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಿಕ 10 ರಿಂದ 15 ಸಾವಿರ ರೂ. ಪಿಂಚಣಿ ನೀಡಬೇಕು” ಎಂದು ಒತ್ತಾಯಿಸಿದರು.

ನ. 22ರಿಂದ ಹೊಸ ನಾಟಕ ಪ್ರದರ್ಶನ:

“ನಮ್ಮ ಕಂಪನಿಯಲ್ಲಿ 18 ಜನ ಕಲಾವಿದರು ಹಾಗೂ 10 ಜನ ಕೆಲಸಗಾರರು ಸೇರಿದಂತೆ ಒಟ್ಟು 50 ಜನರ ತಂಡವಿದೆ. ನ. 22ರಿಂದ ದಾವಣಗೆರೆಯ ನಮ್ಮ ಕಂಪನಿಯ ವತಿಯಿಂದ ಬಾಗಲಕೋಟೆಯ ಬಸವೇಶ್ವರ ಸರ್ಕಲ್ ಹತ್ತಿರದ ದರ್ಬಾರ್ ಶೆಡ್ ಆವರಣದಲ್ಲಿ ‘ನಿದ್ದೆಗೆಡಿಸ್ಯಾಳ ಬಸಲಿಂಗಿ’ ಎಂಬ ನೂತನ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ನಿತ್ಯ ಎರಡು ಆಟಗಳು ನಡೆಯಲಿದ್ದು, ಮಧ್ಯಾಹ್ನ 2.30ಕ್ಕೆ ಮೊದಲ ಆಟ ಹಾಗೂ ಸಂಜೆ 6.45ಕ್ಕೆ ಎರಡನೇ ಆಟ ಪ್ರದರ್ಶನಗೊಳ್ಳಲಿದೆ. ಎಲ್ಲಾ ವರ್ಗದವರಿಗೂ 120 ರೂ. ಟಿಕೆಟ್ ದರ ನಿಗದಿಪಡಿಸಲಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕು” ಎಂದು ಮನವಿ ಮಾಡಿದರು.

Must Read