November 21, 2026
Saturday, November 21, 2026
spot_img

ಮೂರು ರಾಜ್ಯಗಳಲ್ಲಿ ಪ್ರಧಾನಿ ಮೋದಿ ಮಿಂಚಿನ ಸಂಚಾರ: 34,470 ಕೋಟಿ ರೂ. ಯೋಜನೆಗಳಿಗೆ ಚಾಲನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳ ಪ್ರವಾಸ ಕೈಗೊಂಡಿದ್ದಾರೆ. ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಈ ಮೂರು ರಾಜ್ಯಗಳ ಪ್ರಗತಿಗೆ ಪ್ರಧಾನಿ ಹೊಸ ವೇಗ ನೀಡಲಿದ್ದಾರೆ.

ಪ್ರವಾಸದ ಮೊದಲ ಹಂತವಾಗಿ ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಪ್ರತಿಷ್ಠಿತ ಐಐಟಿ ಖರಗ್‌ಪುರದ 75ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 1951ರಲ್ಲಿ ಸ್ಥಾಪನೆಯಾದ ದೇಶದ ಈ ಮೊದಲ ಐಐಟಿ ಸಂಸ್ಥೆಯ 75 ವರ್ಷಗಳ ಸುದೀರ್ಘ ಪಯಣದ ಸಂಕೇತವಾಗಿ, ಪ್ರಧಾನಿಯವರು 75 ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ. ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಈ ಸಂಸ್ಥೆಯ ಕೊಡುಗೆಯನ್ನು ಈ ವೇಳೆ ಸ್ಮರಿಸಲಾಗುವುದು.

ನಂತರ ಬಿಹಾರದ ವೈಶಾಲಿಗೆ ತೆರಳಲಿರುವ ಪ್ರಧಾನಿ, ಸುಮಾರು 34,470 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಸ್ತೆ ಸಂಪರ್ಕ, ಇಂಧನ, ನಗರಾಭಿವೃದ್ಧಿ, ಜಲಸಂಪನ್ಮೂಲ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಈ ಯೋಜನೆಗಳು ಬಲ ತುಂಬಲಿವೆ. ಇದೇ ಸಂದರ್ಭದಲ್ಲಿ, ಗಂಗಾ ನದಿಗೆ ಅಡ್ಡಲಾಗಿ 4,280 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 19.7 ಕಿ.ಮೀ ಉದ್ದದ ‘ನಿತೀಶ್ ಸೇತು’ ಕೇಬಲ್ ಸೇತುವೆಯನ್ನು ಪ್ರಧಾನಿ ದೇಶಕ್ಕೆ ಸಮರ್ಪಿಸಲಿದ್ದಾರೆ. ಇದು ಪಾಟ್ನಾ ಮತ್ತು ವೈಶಾಲಿ ಜಿಲ್ಲೆಗಳ ನಡುವಿನ ಸಂಚಾರವನ್ನು ಸುಗಮಗೊಳಿಸಲಿದೆ.

ಪ್ರವಾಸದ ಅಂತಿಮ ಭಾಗವಾಗಿ ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡಲಿರುವ ಮೋದಿ, ಗೋಮತಿ ನಗರದ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ನಡೆಯಲಿರುವ 5ನೇ ‘ಕೌಶಲ್ಯ ದೀಕ್ಷಾಂತ ಸಮಾರಂಭ’ದಲ್ಲಿ ಭಾಗವಹಿಸಲಿದ್ದಾರೆ. 2021-22ರಲ್ಲಿ ಆರಂಭವಾದ ಈ ವೇದಿಕೆಯು ವೃತ್ತಿಪರ ಶಿಕ್ಷಣ ಪಡೆದ ಯುವಕರನ್ನು ಗೌರವಿಸುವ ಉದ್ದೇಶ ಹೊಂದಿದೆ. ಈ ಬಾರಿ ಐಟಿಐ ಮತ್ತು ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳ 52 ರಾಷ್ಟ್ರಮಟ್ಟದ ಸಾಧಕರಿಗೆ ಪ್ರಧಾನಿ ಸನ್ಮಾನ ಮಾಡಲಿದ್ದಾರೆ.

Must Read