November 21, 2026
Saturday, November 21, 2026
spot_img

ತನ್ನದೇ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡಿದ ಧನುಷ್: ‘O.M’ ಚಿತ್ರಕ್ಕೆ ಐತಿಹಾಸಿಕ ಓಪನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆ ಧನುಷ್ ಅಭಿನಯದ ಹೊಚ್ಚಹೊಸ ಸ್ಪೈ-ಆಕ್ಷನ್ ಥ್ರಿಲ್ಲರ್ ‘ಓ.ಎಂ’ (OM: Operation Mole) ಚಿತ್ರಮಂದಿರಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರ ನವೆಂಬರ್ 20ರಂದು ವಿಶ್ವಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ಧನುಷ್ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಓ.ಎಂ’ ಪಾತ್ರವಾಗಿದೆ.

ಪ್ರಮುಖ ಟ್ರೇಡ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ‘ಓ.ಎಂ’ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ವಿಶ್ವಾದ್ಯಂತ ಬರೋಬ್ಬರಿ 31.55 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಒಟ್ಟು 6,628 ಪ್ರದರ್ಶನಗಳನ್ನು ಕಂಡಿರುವ ಈ ಸಿನಿಮಾ, 17.70 ಕೋಟಿ ರೂಪಾಯಿ ನೆಟ್ (20.55 ಕೋಟಿ ರೂ. ಗ್ರಾಸ್) ಗಳಿಕೆ ಕಂಡಿದೆ. ಭಾಷಾವಾರು ಗಳಿಕೆಯಲ್ಲಿ ತಮಿಳು ಆವೃತ್ತಿಯು 13.35 ಕೋಟಿ ರೂಪಾಯಿಗಳೊಂದಿಗೆ ಸಿಂಹಪಾಲು ಪಡೆದಿದ್ದರೆ, ತೆಲುಗು ಆವೃತ್ತಿ 4 ಕೋಟಿ ರೂಪಾಯಿ ಹಾಗೂ ಹಿಂದಿ ಆವೃತ್ತಿ 35 ಲಕ್ಷ ರೂಪಾಯಿ ಬಾಚಿಕೊಂಡಿದೆ. ಇದರ ಜೊತೆಗೆ ವಿದೇಶಿ ಮಾರುಕಟ್ಟೆಯಲ್ಲೂ ಮೋಡಿ ಮಾಡಿರುವ ಸಿನಿಮಾ, 11 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮೂಲಕ ಒಟ್ಟು ಗಳಿಕೆಯನ್ನು 31.55 ಕೋಟಿಗೆ ಏರಿಸಿದೆ.

ಈ ಭರ್ಜರಿ ಆರಂಭದೊಂದಿಗೆ ಧನುಷ್ ತಮ್ಮದೇ ಹಿಂದಿನ ಹಲವು ಸಿನಿಮಾಗಳ ಮೊದಲ ದಿನದ ದಾಖಲೆಗಳನ್ನು ಮುರಿದಿದ್ದಾರೆ. ಮೊದಲ ದಿನ 6.20 ಕೋಟಿ ರೂ. ಗಳಿಸಿದ್ದ ‘ಕರ’ ಚಿತ್ರವನ್ನು ಬಹಳ ಹಿಂದೆ ಹಾಕಿರುವ ”ಓ.ಎಂ’, ‘ರಾಯನ್’ ಮತ್ತು ‘ಕುಬೇರ’ ಸಿನಿಮಾಗಳ ಓಪನಿಂಗ್ ಗಳಿಕೆಯನ್ನೂ ಮೀರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈವರೆಗೆ ಧನುಷ್ ಅವರ ಅತಿದೊಡ್ಡ ಓಪನರ್ ಎನಿಸಿಕೊಂಡಿದ್ದ ‘ತೇರೆ ಇಷ್ಕ್ ಮೇ’ (16 ಕೋಟಿ ರೂ.) ಚಿತ್ರದ ದಾಖಲೆಯನ್ನು ಅಳಿಸಿಹಾಕುವ ಮೂಲಕ, ‘ಓ.ಎಂ’ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

Must Read

Skip to toolbar