ಕತ್ತರಿಸಿದ ಸೇಬಿನ ಹೋಳುಗಳು ಕೆಲವೇ ನಿಮಿಷಗಳಲ್ಲಿ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಆದರೆ ಹಣ್ಣು ಕೆಟ್ಟಿದೆ ಎಂದು ಬಿಸಾಡುವ ಅಗತ್ಯವಿಲ್ಲ. ಸರಳ ವಿಧಾನಗಳಿಂದ ಇದನ್ನು ಸುಲಭವಾಗಿ ತಡೆಯಬಹುದು.
ಸೇಬನ್ನು ಕತ್ತರಿಸಿದಾಗ ಅದರ ಒಳಭಾಗ ಗಾಳಿಯಲ್ಲಿರುವ ಆಮ್ಲಜನಕಕ್ಕೆ ತೆರೆದುಕೊಳ್ಳುತ್ತದೆ. ಸೇಬಿನಲ್ಲಿರುವ ‘ಪಾಲಿಫಿನಾಲ್ ಆಕ್ಸಿಡೇಸ್’ ಎಂಬ ಕಿಣ್ವವು ಆಮ್ಲಜನಕದೊಂದಿಗೆ ಬೆರೆತು ರಾಸಾಯನಿಕ ಕ್ರಿಯೆ ನಡೆಸುತ್ತದೆ. ಇದರಿಂದ ಹಣ್ಣಿನ ಮೇಲ್ಭಾಗ ಕಂದು ಬಣ್ಣಕ್ಕೆ ಬದಲಾಗುತ್ತದೆ. ಇದನ್ನು ವಿಜ್ಞಾನದಲ್ಲಿ ‘ಎಂಜೈಮ್ಯಾಟಿಕ್ ಬ್ರೌನಿಂಗ್’ ಎನ್ನುತ್ತಾರೆ. ಬಣ್ಣ ಬದಲಾದರೂ ಹಣ್ಣು ತಿನ್ನಲು ಸುರಕ್ಷಿತವಾಗಿರುತ್ತದೆ, ಆದರೆ ನೋಡಲು ಆಕರ್ಷಕವಾಗಿರುವುದಿಲ್ಲ.
ನಿಂಬೆಹಣ್ಣು, ಕಿತ್ತಳೆ ಅಥವಾ ಅನಾನಸ್ ರಸದಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಸೇಬು ಕಪ್ಪಾಗುವುದನ್ನು ತಡೆಯುವ ಅತ್ಯುತ್ತಮ ಮದ್ದು. ಕತ್ತರಿಸಿದ ಸೇಬಿನ ಹೋಳುಗಳ ಮೇಲೆ ಸ್ವಲ್ಪ ನಿಂಬೆ ರಸವನ್ನು ಸಿಂಪಡಿಸಿದರೆ ಅಥವಾ ತಣ್ಣೀರಿನಲ್ಲಿ ಕೆಲವು ಹನಿ ನಿಂಬೆ ರಸ ಬೆರೆಸಿ ಅದರಲ್ಲಿ ಹೋಳುಗಳನ್ನು ಕೆಲ ನಿಮಿಷ ಅದ್ದಿ ತೆಗೆದರೆ ಬಣ್ಣ ಬದಲಾಗುವುದಿಲ್ಲ. ಹುಳಿ ರುಚಿ ಇಷ್ಟಪಡದವರು ಸ್ವಲ್ಪ ಪ್ರಮಾಣದಲ್ಲಷ್ಟೇ ಬಳಸಬೇಕು.
ಸೇಬು ಕತ್ತರಿಸಿದ ತಕ್ಷಣ ತಣ್ಣನೆಯ ನೀರಿನಲ್ಲಿ ಹಾಕಿಡುವುದರಿಂದ ಗಾಳಿಯ ಸಂಪರ್ಕ ತಪ್ಪಿ ಬಣ್ಣ ಉಳಿಯುತ್ತದೆ. ಹಾಗೆಯೇ, ಒಂದು ಲೋಟ ನೀರಿಗೆ ಕಾಲು ಚಮಚಕ್ಕಿಂತ ಕಡಿಮೆ ಉಪ್ಪು ಬೆರೆಸಿ, ಅದರಲ್ಲಿ ಸೇಬಿನ ಹೋಳುಗಳನ್ನು ಕೇವಲ ಎರಡರಿಂದ ಮೂರು ನಿಮಿಷ ನೆನೆಸಿ, ನಂತರ ಶುದ್ಧ ನೀರಿನಿಂದ ತೊಳೆದರೆ ಹಣ್ಣು ಕಪ್ಪಾಗುವುದಿಲ್ಲ. ಆದರೆ ಉಪ್ಪು ಹೆಚ್ಚಾದರೆ ರುಚಿ ಕೆಡಬಹುದು.
ಮಕ್ಕಳ ಶಾಲಾ ಟಿಫಿನ್ ಅಥವಾ ಪ್ರಯಾಣಕ್ಕೆ ಸೇಬು ಕೊಂಡೊಯ್ಯುವಾಗ ಗಾಳಿಯಾಡದ ಡಬ್ಬದಲ್ಲಿ ಹಾಕಿಡಬೇಕು. ರಬ್ಬರ್ ಬ್ಯಾಂಡ್ ಬಳಸಿ ಮತ್ತೆ ಸೇಬನ್ನು ಸೇರಿಸಿ ಕಟ್ಟುವುದೂ ಗಾಳಿಯ ಸಂಪರ್ಕ ತಡೆಯುತ್ತದೆ. ಈ ಸುಲಭ ವಿಧಾನಗಳನ್ನು ಅನುಸರಿಸಿದರೆ ಸೇಬಿನ ಹೋಳುಗಳು ದೀರ್ಘಕಾಲ ತಾಜಾ ಮತ್ತು ರುಚಿಕರವಾಗಿರುತ್ತವೆ.



