ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತದ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ತಾಳ್ಮೆ ಮತ್ತು ಆಕ್ರಮಣಕಾರಿ ಆಟದ ಸಮ್ಮಿಶ್ರಣದೊಂದಿಗೆ 136 ರನ್ ಗಳಿಸಿದ ಅವರು, ನ್ಯೂಝಿಲೆಂಡ್ ನೆಲದಲ್ಲಿ ತಾವು ಆಡಿದ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲೇ ಶತಕ ಬಾರಿಸಿದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಸಾಧನೆಯ ಮೂಲಕ ರಾಹುಲ್ ಬರೋಬ್ಬರಿ 50 ವರ್ಷಗಳ ಹಳೆಯ ದಾಖಲೆಯನ್ನು ಸರಿಗಟ್ಟಿದ್ದಾರೆ. 1976ರ ನ್ಯೂಝಿಲೆಂಡ್ ಪ್ರವಾಸದ ವೇಳೆ ಆಕ್ಲೆಂಡ್ನಲ್ಲಿ ನಡೆದ ಪಂದ್ಯದಲ್ಲಿ ದಿಗ್ಗಜ ಸುನಿಲ್ ಗವಾಸ್ಕರ್ (116 ರನ್) ಹಾಗೂ ಸುರೀಂದರ್ ಅಮರನಾಥ್ (124 ರನ್) ತಮ್ಮ ಮೊದಲ ಇನ್ನಿಂಗ್ಸ್ನಲ್ಲೇ ಶತಕ ಸಿಡಿಸಿದ್ದರು. ಅರ್ಧ ಶತಮಾನದ ನಂತರ ಇದೀಗ ರಾಹುಲ್ ಅದೇ ಅಪರೂಪದ ಮೈಲಿಗಲ್ಲನ್ನು ತಲುಪಿದ್ದಾರೆ. ಅಲ್ಲದೆ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ಈ ನಾಲ್ಕೂ ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಹಾಗೂ ಪಾಕಿಸ್ತಾನದ ಸಯೀದ್ ಅನ್ವರ್ ನಂತರ ಈ ಸಾಧನೆ ಮಾಡಿದ ಏಷ್ಯಾದ ಎರಡನೇ ಆರಂಭಿಕ ದಾಂಡಿಗ ಎಂಬ ಕೀರ್ತಿಗೂ ಭಾಜನರಾದರು. ಇದು ಅವರ ಟೆಸ್ಟ್ ವೃತ್ತಿಜೀವನದ 13ನೇ ಶತಕವಾಗಿದೆ.
ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಮೊದಲ ವಿಕೆಟ್ಗೆ 130 ರನ್ ಹಾಗೂ ದೇವದತ್ ಪಡಿಕ್ಕಲ್ ಅವರೊಂದಿಗೆ 165 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ನ್ಯೂಝಿಲೆಂಡ್ನಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಎರಡು ಶತಕದ ಜೊತೆಯಾಟಗಳಲ್ಲಿ ಭಾಗಿಯಾದ ಭಾರತದ ಮೂರನೇ ಆಟಗಾರ ಎನಿಸಿಕೊಂಡರು.
ನ್ಯೂಝಿಲೆಂಡ್ನ ಮೊದಲ ಇನ್ನಿಂಗ್ಸ್ ಮೊತ್ತವಾದ 368 ರನ್ಗಳಿಗೆ ಉತ್ತರವಾಗಿ ಭಾರತ, ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 486 ರನ್ ಕಲೆಹಾಕಿದ್ದು, ಒಟ್ಟು 118 ರನ್ಗಳ ಮಹತ್ವದ ಮುನ್ನಡೆ ಸಾಧಿಸಿದೆ. ನಾಲ್ಕನೇ ದಿನದಾಟದ ಮೊದಲೆರಡು ಸೆಷನ್ಗಳಲ್ಲಿ ಭಾರತ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಿದೆ.



