ಹೊಸದಿಗಂತ ವರದಿ ಯಲ್ಲಾಪುರ:
ಜನರ ಬಳಿಗೇ ಆಡಳಿತ ಹೋಗಬೇಕು ಎಂಬ ಉದ್ದೇಶದಿಂದ ಹಮ್ಮಿಕೊಂಡಿರುವ ಆಂದೋಲನ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಅವರು ಶನಿವಾರ ಪಟ್ಟಣದ ಕಾರ್ಮಿಕ ಭವನದಲ್ಲಿ ತಾಲೂಕು ಮಟ್ಟದ ಪ್ರಜಾಸೇವೆ ಅಭಿಯಾನ ಉದ್ಘಾಟಿಸಿ ಮಾತನಾಡಿ, ಇದು ಕಾಟಾಚಾರಕ್ಕೆ, ನೆಪಕ್ಕೆ ಮಾತ್ರ ಮಾಡುವ ಅಭಿಯಾನ ಆಗಬಾರದು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರಲ್ಲದೇ ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಕನಿಷ್ಠ 15 ದಿನಗಳ ಒಳಗಾಗಿ ಪರಿಹಾರ ಒದಗಿಸಬೇಕು. ಸಾಧ್ಯವಾಗದಿದ್ದರೆ ನಿಖರವಾದ ಕಾರಣ ನೀಡಬೇಕು. ಅನಾವಶ್ಯಕವಾಗಿ ವಿಳಂಬ ಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ವ್ಯವಸ್ಥೆ ಈ ಯೋಜನೆಯಲ್ಲಿದೆ ಎಂದು ಎಚ್ಚರಿಸಿದರು.
ಯಲ್ಲಾಪುರ ತಾಲೂಕಿನಲ್ಲಿ ಶೇ.99ರಷ್ಟು ಪ್ರಗತಿ:
ತಾಲೂಕಿನಲ್ಲಿ ಬಂದಿದ್ದ 1,418 ಅರ್ಜಿಗಳಲ್ಲಿ ಈಗಾಗಲೇ 993 ಅರ್ಜಿಗಳು ವಿಲೇವಾರಿಯಾಗಿದ್ದು, ಶೇ.99ರಷ್ಟು ಪ್ರಗತಿ ಸಾಧಿಸಲಾಗಿದೆ. ಅನೇಕ ಜನರಿಗೆ ಪರಿಹಾರ ಕೊಡಲಾಗಿದೆ ಎಂದು ಅವರು ತಿಳಿಸಿದರು. ಇದಕ್ಕೆ ಸಹಕರಿಸಿದ ತಾಲೂಕಿನ ಅಧಿಕಾರಿಗಳು ಹಾಗೂ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ ಶಾಸಕರಿಗೆ ಅವರು ಅಭಿನಂದನೆ ಸಲ್ಲಿಸಿದರು.
ಜಿಲ್ಲೆಯಲ್ಲಿ 5,421 ಅರ್ಜಿ ವಿಲೇವಾರಿ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 6,014 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 5,421 ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಜಿದಾರರಿಗೆ ಪರಿಹಾರ ನೀಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜನರ ಸಮಸ್ಯೆ ಪರಿಹರಿಸುವಲ್ಲಿ ಪ್ರಗತಿ ಕಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಮುಂದೆಯೂ ಇದೇ ರೀತಿ ತ್ವರಿತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಶಿವರಾಮ ಹೆಬ್ಬಾರ್ ಪ್ರಾಸ್ತವಿಕ ಮಾತನಾಡಿದರು.
ಜಿಲ್ಲಾಧಿಕಾರಿ ಭೋಯಲ್ ಹರ್ಷ, ಎಸ್ ಪಿ ದೀಪನ್ ಎಂ ಎನ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ್, ತಾಲೂಕಾಧ್ಯಕ್ಷ ಉಲ್ಲಾಸ್ ಶಾನಭಾಗ್, ಇತರರು ಹಾಗೂ ಅಧಿಕಾರಿಗಳು ಇದ್ದರು.
ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗರಾಜ ನಾಯ್ಕ್ ಸ್ವಾಗತಿಸಿದರು.
ಸೌಮ್ಯಶ್ರೀ ಹಾನಗಲ್ ನಿರ್ವಹಿಸಿದರು.



