November 21, 2026
Saturday, November 21, 2026
spot_img

ಒಂದೇ ಕಥೆ, ಎರಡು ಹಾದಿ? ‘ಹನುಮಾನ್ 2: ದಿ ರೈಸ್ ಆಫ್ ವಾನರಸ್’ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದ ಸೂಪರ್ ಹೀರೋ ಸಿನಿಮಾ ‘ಹನು-ಮಾನ್’ ನಿರ್ಮಾಪಕರು ಇದೀಗ ಮತ್ತೊಂದು ಬೃಹತ್ ಫ್ಯಾಂಟಸಿ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ‘ಹನು-ಮಾನ್ 2: ದಿ ರೈಸ್ ಆಫ್ ವಾನರಾಸ್’ ಎಂಬ ಹೊಸ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದು, ಯುವ ನಟ ಪಂಜ ವೈಷ್ಣವ್ ತೇಜ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಲ್ಲಿ ತೇಜ ಸಜ್ಜಾ ಮಿಂಚಿದ್ದರಿಂದ, ಈ ಹೊಸ ಘೋಷಣೆಯು ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

ಚಿತ್ರತಂಡ ಬಿಡುಗಡೆ ಮಾಡಿರುವ ಮೊದಲ ಪೋಸ್ಟರ್, ಅದ್ಭುತವಾದ ಕಾಲ್ಪನಿಕ ಲೋಕದ ಝಲಕ್ ನೀಡುತ್ತಿದೆ. ದೈವಿಕ ಹಿನ್ನೆಲೆಯಲ್ಲಿ, ಮೋಡಗಳನ್ನು ಸೀಳಿಕೊಂಡು ಮೇಲಕ್ಕೆ ಏರುತ್ತಿರುವ ವ್ಯಕ್ತಿಯ ಚಿತ್ರಣವು ನೋಡುಗರ ಗಮನ ಸೆಳೆಯುತ್ತಿದೆ. “ಒಂದು ಕನಸಿನೊಂದಿಗೆ ಶುರುವಾದ ಪಯಣ, ಈಗ ಮತ್ತಷ್ಟು ದೊಡ್ಡ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ. ಪಂಜ ವೈಷ್ಣವ್ ತೇಜ್ ಮತ್ತು ನಿರ್ದೇಶಕ ವಿ.ಐ. ಆನಂದ್ ಅವರೊಂದಿಗೆ ಸೇರಿ ಅದ್ಭುತ ಲೋಕವನ್ನು ಸೃಷ್ಟಿಸಲು ಉತ್ಸುಕರಾಗಿದ್ದೇವೆ” ಎಂದು ನಿರ್ಮಾಣ ಸಂಸ್ಥೆ ಸಂತಸ ಹಂಚಿಕೊಂಡಿದೆ.

ಮೊದಲ ಭಾಗದ ನಿರ್ಮಾಪಕ ಕೆ. ನಿರಂಜನ್ ರೆಡ್ಡಿ ಮತ್ತು ನಿರ್ದೇಶಕ ಪ್ರಶಾಂತ್ ವರ್ಮಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳ ನಡುವೆಯೇ ಈ ಸಿನಿಮಾ ಘೋಷಣೆಯಾಗಿದೆ. ಪ್ರಶಾಂತ್ ವರ್ಮಾ ಅವರು ಮೈತ್ರಿ ಮೂವಿ ಮೇಕರ್ಸ್ ಜೊತೆ ಸೇರಿ ರಿಷಬ್ ಶೆಟ್ಟಿ ನಟನೆಯ ‘ಜೈ ಹನುಮಾನ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದರೆ, ಇತ್ತ ನಿರಂಜನ್ ರೆಡ್ಡಿ ಪ್ರತ್ಯೇಕ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಇದರಿಂದಾಗಿ ತೇಜ ಸಜ್ಜಾ ಅವರನ್ನು ಕೈಬಿಡಲಾಗಿದೆಯೇ ಮತ್ತು ಈ ಚಿತ್ರಕ್ಕೂ ‘ಜೈ ಹನುಮಾನ್’ ಚಿತ್ರಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಆದರೆ, ನಿರ್ಮಾಪಕರು ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.

ವಿ.ಐ. ಆನಂದ್ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಬಂಡವಾಳ ಹೂಡುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ‘ಹನು-ಮಾನ್ 2: ದಿ ರೈಸ್ ಆಫ್ ವಾನರಾಸ್’ ಬಿಡುಗಡೆಯಾಗಲಿದೆ. ಚಿತ್ರದ ಉಳಿದ ತಾರಾಗಣ, ಕಥಾಹಂದರ ಮತ್ತು ಬಿಡುಗಡೆ ದಿನಾಂಕದ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ.

Must Read

Skip to toolbar