ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಅವರು ಶನಿವಾರ ಮುಂಬೈನಲ್ಲಿ ನಡೆದ ‘ಗ್ಲೋಬಲ್ ಪೀಸ್ ಆನರ್ಸ್’ ಕಾರ್ಯಕ್ರಮದಲ್ಲಿ ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ಕುರಿತು ಅತ್ಯಂತ ಅರ್ಥಪೂರ್ಣವಾದ ಭಾಷಣ ಮಾಡಿದರು. ದ್ವೇಷವನ್ನು ಪ್ರೀತಿಯಾಗಿ ಬದಲಿಸಲು ಹಿಂಸೆಯ ಬದಲು ಸಂವಾದವನ್ನು ಮತ್ತು ಭಯದ ಬದಲು ನಂಬಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಭಾಷಣದ ಆರಂಭದಲ್ಲಿ ಭಯೋತ್ಪಾದಕ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರಿಗೆ ಶಾರುಖ್ ಖಾನ್ ಶ್ರದ್ಧಾಂಜಲಿ ಸಲ್ಲಿಸಿದರು. ದೇಶವನ್ನು ರಕ್ಷಿಸುವಾಗ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಭದ್ರತಾ ಸಿಬ್ಬಂದಿಗಳಿಗೆ ಅವರು ಗೌರವಪೂರ್ವಕವಾಗಿ ಸೆಲ್ಯೂಟ್ ಹೊಡೆದರು.
ತಮ್ಮ ಕಿರಿಯ ಮಗನೊಂದಿಗಿನ ಸಂಭಾಷಣೆಯನ್ನು ನೆನೆದ ಶಾರುಖ್, “ಒಂದು ದಿನ ನನ್ನ ಕಿರಿಯ ಮಗ, ದ್ವೇಷವನ್ನು ಪ್ರೀತಿಯನ್ನಾಗಿ ಹೇಗೆ ಬದಲಾಯಿಸಬಹುದು ಎಂದು ಕೇಳಿದ. ಅದಕ್ಕೆ ನಾನು ಬಹಳ ಸರಳವಾಗಿ ಉತ್ತರಿಸಿದೆ. ನಾವೆಲ್ಲರೂ ಹಿಂಸೆಯ ಬದಲು ಮಾತುಕತೆಯನ್ನು, ಭಯದ ಬದಲು ನಂಬಿಕೆಯನ್ನು ಆರಿಸಿಕೊಂಡು ಒಟ್ಟಾಗಿ ಬಾಳಲು ನಿರ್ಧರಿಸಿದರೆ, ಪ್ರೀತಿಗೆ ಯಾವಾಗಲೂ ಜಯ ಸಿಗುತ್ತದೆ ಎಂದು ಹೇಳಿದೆ” ಎಂದರು.
“ಶಾಂತಿ ಎಂಬುದು ಒಂದು ಸಣ್ಣ ಜಾಗದಿಂದ, ಅಂದರೆ ನಮ್ಮೊಳಗಿನಿಂದ, ನಮ್ಮದೇ ಹೃದಯದಿಂದ ಶುರುವಾಗುತ್ತದೆ. ಅದು ಕೇವಲ ಮಾತಲ್ಲ; ಪ್ರತಿದಿನವೂ ನಾವು ಪೂರೈಸಬೇಕಾದ ಒಂದು ನಿರ್ಧಾರ, ಜವಾಬ್ದಾರಿ ಮತ್ತು ವಾಗ್ದಾನವಾಗಿದೆ” ಎಂದು ಶಾರುಖ್ ಅಭಿಪ್ರಾಯಪಟ್ಟರು. ಸಾಮಾನ್ಯ ಮನುಷ್ಯನ ಶಕ್ತಿಯನ್ನು ಎಂದಿಗೂ ಮರೆಯಬಾರದು ಎಂದ ಅವರು, ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಿದೆ ಎಂದರು.
ನಾವೆಲ್ಲರೂ ಎಲ್ಲ ವಿಷಯಗಳಿಗೂ ಒಪ್ಪಬೇಕಾಗಿಲ್ಲ, ಆದರೆ ಪ್ರತಿಯೊಬ್ಬರ ಜೀವನದ ಕಥೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ನಾವು ಎಷ್ಟೇ ತಪ್ಪುಗಳನ್ನು ಮಾಡಿದರೂ, ಇನ್ನೊಬ್ಬರಿಗೆ ತೊಂದರೆ ಅಥವಾ ನೋವು ನೀಡಬಾರದು ಎಂಬ ಸಣ್ಣ ಪ್ರತಿಜ್ಞೆಯನ್ನು ಇಂದು ಮಾಡೋಣ ಎಂದು ಕರೆ ನೀಡಿದರು. “ನಮ್ಮ ದೇಶ ಭಾರತವು ಶಾಂತಿ, ಸೌಹಾರ್ದತೆ ಮತ್ತು ಸದ್ಭಾವನೆಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ” ಎಂದು ಹೆಮ್ಮೆಯಿಂದ ನುಡಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ನೇತೃತ್ವದ ‘ದಿವ್ಯಾಜ್ ಫೌಂಡೇಶನ್’ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಈ ಅರ್ಥಪೂರ್ಣ ಸಮಾರಂಭದಲ್ಲಿ ಭಾಗವಹಿಸಿದ್ದರು.



