November 22, 2026
Sunday, November 22, 2026
spot_img

ಶಬರಿಮಲೆ ಯಾತ್ರಿಕರ ಭಕ್ತಿಗೆ ಕೇಂದ್ರದ ಮನ್ನಣೆ: ವಿಮಾನದಲ್ಲೇ ಪವಿತ್ರ ‘ಇರುಮುಡಿ’ ಕೊಂಡೊಯ್ಯಲು ಅಸ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ವಿಮಾನದ ಮೂಲಕ ಯಾತ್ರೆ ಕೈಗೊಳ್ಳುವ ಲಕ್ಷಾಂತರ ಭಕ್ತರಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಸತತ ಮೂರನೇ ವರ್ಷವೂ ಅಯ್ಯಪ್ಪ ಭಕ್ತರು ತಮ್ಮ ಪವಿತ್ರ ‘ಇರುಮುಡಿ ಕಟ್ಟು’ಗಳನ್ನು ವಿಮಾನದ ಕ್ಯಾಬಿನ್‌ನಲ್ಲಿಯೇ (ಹ್ಯಾಂಡ್ ಬ್ಯಾಗೇಜ್ ಆಗಿ) ತಮ್ಮೊಂದಿಗೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಅಧಿಕೃತ ಅನುಮತಿ ನೀಡಿದೆ.

ಸಾಮಾನ್ಯವಾಗಿ ವಿಮಾನಯಾನದ ಕಟ್ಟುನಿಟ್ಟಿನ ಭದ್ರತಾ ನಿಯಮಗಳ ಪ್ರಕಾರ, ತೆಂಗಿನಕಾಯಿ ಸೇರಿದಂತೆ ಕೆಲವು ಪೂಜಾ ಸಾಮಗ್ರಿಗಳನ್ನು ವಿಮಾನದ ಒಳಭಾಗಕ್ಕೆ ತೆಗೆದುಕೊಂಡು ಹೋಗಲು ನಿರ್ಬಂಧವಿರುತ್ತದೆ. ಆದರೆ, ಶಬರಿಮಲೆ ಯಾತ್ರಿಕರ ಶತಮಾನಗಳ ಸಂಪ್ರದಾಯ ಮತ್ತು ಪವಿತ್ರ ಭಾವನೆಗಳಿಗೆ ಗೌರವ ನೀಡಿರುವ ಕೇಂದ್ರ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರು, ಈ ಬಾರಿಯ ಮಂಡಲ-ಮಕರವಿಳಕ್ಕು ಯಾತ್ರೆಯ ಅವಧಿಯಲ್ಲೂ ಭದ್ರತಾ ನಿಯಮಗಳಲ್ಲಿ ವಿಶೇಷ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಇರುಮುಡಿಯನ್ನು ಚೆಕ್-ಇನ್ ಲಗೇಜ್‌ಗೆ ಹಾಕುವ ಆತಂಕವಿಲ್ಲದೆ, ಭಕ್ತರು ತಮ್ಮ ಮಡಿಲಲ್ಲೇ ಭಕ್ತಿಪೂರ್ವಕವಾಗಿ ಇಟ್ಟುಕೊಂಡು ಪ್ರಯಾಣಿಸಬಹುದು. ವಿಮಾನ ನಿಲ್ದಾಣಗಳಲ್ಲಿ ಯಾತ್ರಿಕರಿಗೆ ಯಾವುದೇ ತೊಂದರೆಯಾಗದಂತೆ ಸಹಕರಿಸಲು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ದೇಶದ ಎಲ್ಲಾ ವಿಮಾನ ನಿಲ್ದಾಣಗಳ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ವಿಮಾನ ಪ್ರಯಾಣದ ಸಡಿಲಿಕೆಯ ಜೊತೆಗೆ, ಕೇರಳ ಸರ್ಕಾರ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ ಜಾರಿಗೆ ತಂದಿರುವ ಈ ಕೆಳಗಿನ ನಿಯಮಗಳನ್ನು ಭಕ್ತರು ಕಡ್ಡಾಯವಾಗಿ ಪಾಲಿಸಬೇಕಿದೆ:

ಈ ಬಾರಿ ಪಂಪಾದಲ್ಲಿ ಸ್ಪಾಟ್ ಬುಕಿಂಗ್ ರದ್ದುಗೊಳಿಸಿ ನೀಲಕ್ಕಲ್‌ಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ದಿನಕ್ಕೆ 10,000 ಭಕ್ತರಿಗೆ ಮಾತ್ರ ಅವಕಾಶವಿದ್ದು, ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

ಎರುಮೇಲಿ ಮತ್ತು ವಂಡಿಪೆರಿಯಾರ್-ಸತ್ರಂ ಅರಣ್ಯ ಮಾರ್ಗಗಳ ಮೂಲಕ ಸಾಗುವ ಭಕ್ತರಿಗೂ ದರ್ಶನ ಬುಕಿಂಗ್ ಕಡ್ಡಾಯವಾಗಿದ್ದು, ಇಲ್ಲಿ ದಿನಕ್ಕೆ ತಲಾ 2,000 ಜನರಿಗೆ ಮಾತ್ರ ಸ್ಪಾಟ್ ಬುಕಿಂಗ್ ಸೀಮಿತಗೊಳಿಸಲಾಗಿದೆ.

ಖಾಸಗಿ ವಾಹನಗಳನ್ನು ನೀಲಕ್ಕಲ್‌ನಲ್ಲೇ ನಿಲ್ಲಿಸಿ, ಅಲ್ಲಿಂದ ಪಂಪಾಗೆ ಕೇರಳ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿಯೇ ತೆರಳಬೇಕು.

ಪವಿತ್ರ ಪಂಪಾ ನದಿಯ ಪರಿಸರ ಕಾಪಾಡುವ ದೃಷ್ಟಿಯಿಂದ, ನದಿಯಲ್ಲಿ ಬಟ್ಟೆಗಳನ್ನು ಎಸೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Must Read

Skip to toolbar