ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅವರು ಸದ್ಯ ತಮ್ಮ O.M ತಮಿಳು ಚಿತ್ರದ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ನವೆಂಬರ್ 20 ರಂದು ತೆರೆಕಂಡ ಈ ಚಿತ್ರದಲ್ಲಿ ಧನುಷ್, ಮಮ್ಮುಟ್ಟಿ ಮತ್ತು ಶ್ರೀಲೀಲಾ ಅವರಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ‘ರಾಮಾಯಣ’ ಚಿತ್ರದ ಬೆನ್ನಲ್ಲೇ ಬಿಡುಗಡೆಯಾದ ‘O.M’ ಸಿನಿಮಾದಲ್ಲೂ ಸಾಯಿ ಪಲ್ಲವಿ ಅವರ ನಟನೆಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೇರವಾಗಿ ಕಣ್ತುಂಬಿಕೊಳ್ಳಲು ಶನಿವಾರ ಸಂಜೆ ಸಾಯಿ ಪಲ್ಲವಿ ಚೆನ್ನೈನ ವಡಪಳನಿಯಲ್ಲಿರುವ ನೆಕ್ಸಸ್ ವಿಜಯ ಮಾಲ್ನ ಚಿತ್ರಮಂದಿರಕ್ಕೆ ದಿಢೀರ್ ಭೇಟಿ ನೀಡಿದ್ದಾರೆ.
ಗೋವಾದಲ್ಲಿ ನಡೆದ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಾಯಿ ಪಲ್ಲವಿ, ಅಲ್ಲಿಂದ ಮರಳಿದ ತಕ್ಷಣವೇ ನೇರವಾಗಿ ಚೆನ್ನೈನ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಬಿಗಿ ಭದ್ರತೆಯ ನಡುವೆ ಥಿಯೇಟರ್ ಒಳಗೆ ಪ್ರವೇಶಿಸಿದ ನಟಿಯನ್ನು ಕಂಡು ಪ್ರೇಕ್ಷಕರು ಅಚ್ಚರಿಗೊಂಡರು. ನೆಚ್ಚಿನ ನಟಿಯನ್ನು ಎದುರು ಕಂಡ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಡೀ ಚಿತ್ರಮಂದಿರ ಶಿಳ್ಳೆ, ಚಪ್ಪಾಳೆಗಳಿಂದ ತುಂಬಿಹೋಯಿತು. ಅಭಿಮಾನಿಗಳತ್ತ ಕೈಬೀಸಿದ ಸಾಯಿ ಪಲ್ಲವಿ, ತಮ್ಮ ನಟನೆಯನ್ನು ಮೆಚ್ಚಿಕೊಂಡ ಪ್ರೇಕ್ಷಕರಿಗೆ ಎರಡೂ ಕೈಗಳನ್ನು ಮುಗಿದು ವಿನಮ್ರವಾಗಿ ಧನ್ಯವಾದ ಅರ್ಪಿಸಿದರು.
ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಅಕ್ರಮ ರಕ್ತಚಂದನ ಕಳ್ಳಸಾಗಣೆಯನ್ನು ತನಿಖೆ ಮಾಡುವ ‘ನಿತ್ಯಾ ರೆಡ್ಡಿ’ ಎಂಬ ಖಡಕ್ ಸಿಬಿಐ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ನೈಜತೆ ತುಂಬಲು ಅವರು ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡಿದ್ದರು. ಮಗಳ ಈ ಹೊಸ ಲುಕ್ ಕಂಡು ಮೊದಲಿಗೆ ಅವರ ಪೋಷಕರು ಕೂಡ ಶಾಕ್ ಆಗಿದ್ದರು. ಆದರೆ, ನಿರ್ದೇಶಕ ರಾಜ್ಕುಮಾರ್ ಮತ್ತು ಕಥೆಯ ಮೇಲಿನ ಸಂಪೂರ್ಣ ನಂಬಿಕೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ನಟಿ ತಿಳಿಸಿದ್ದಾರೆ.
ಚಿತ್ರ ಬಿಡುಗಡೆಯಾಗುವವರೆಗೂ ಈ ಲುಕ್ ಬಹಿರಂಗವಾಗಬಾರದೆಂದು ಚಿತ್ರೀಕರಣದ ಸಮಯದಲ್ಲಿ ಅವರು ತಲೆಗೆ ಸ್ಕಾರ್ಫ್ ಸುತ್ತಿಕೊಂಡು ಎಚ್ಚರಿಕೆ ವಹಿಸಿದ್ದರು. ಈ ಹಿಂದೆ ರಾಷ್ಟ್ರಪ್ರಶಸ್ತಿ ವಿಜೇತ ‘ಅಮರನ್’ ಚಿತ್ರದಲ್ಲೂ ಈ ಜೋಡಿ ಒಟ್ಟಿಗೆ ಕೆಲಸ ಮಾಡಿ ಭರ್ಜರಿ ಯಶಸ್ಸು ಕಂಡಿತ್ತು.



