November 22, 2026
Sunday, November 22, 2026
spot_img

‘ನಿತೀಶ್ ಸೇತು’ ಉದ್ಘಾಟನೆ ಬೆನ್ನಲ್ಲೇ ಹೈಡ್ರಾಮಾ: ಎನ್‌ಡಿಎ ಬ್ಯಾನರ್ ಹರಿದು ಹಾಕಿದ ಆರ್‌ಜೆಡಿ ಕಾರ್ಯಕರ್ತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ವೈಶಾಲಿಯಲ್ಲಿ ನೂತನವಾಗಿ ನಿರ್ಮಿಸಲಾದ ‘ನಿತೀಶ್ ಸೇತು’ ಸೇತುವೆಯನ್ನು ಉದ್ಘಾಟಿಸಿದ ಕೆಲವೇ ಗಂಟೆಗಳಲ್ಲಿ ತೀವ್ರ ರಾಜಕೀಯ ಹೈಡ್ರಾಮಾ ನಡೆದಿದೆ. ಶನಿವಾರ ಸೇತುವೆಯ ಮೇಲೆ ಜಮಾಯಿಸಿದ ರಾಷ್ಟ್ರೀಯ ಜನತಾ ದಳ ಪಕ್ಷದ ಕಾರ್ಯಕರ್ತರು, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ನೂರಾರು ಆರ್‌ಜೆಡಿ ಬೆಂಬಲಿಗರು ಸೇತುವೆಯ ಮೇಲೆ ಅಳವಡಿಸಿದ್ದ ಬ್ಯಾನರ್‌ಗಳನ್ನು ಕಿತ್ತೆಸೆದು, ತಮ್ಮ ಪಕ್ಷದ ವರಿಷ್ಠ ಲಾಲು ಪ್ರಸಾದ್ ಯಾದವ್ ಹಾಗೂ ವಿಪಕ್ಷ ನಾಯಕ ತೇಜಸ್ವಿ ಯಾದವ್ ಪರವಾಗಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ದೃಶ್ಯವೂ ಸೆರೆಯಾಗಿದೆ. ಅಭಿವೃದ್ಧಿ ಯೋಜನೆಯೊಂದನ್ನು ಆರ್‌ಜೆಡಿ ರಾಜಕೀಯಗೊಳಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

ಸುಮಾರು 4,280 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಆರು ಪಥದ ಸೇತುವೆಯು ಕಚ್ಚಿ ದರ್ಗಾ ಮತ್ತು ಬಿದುಪುರವನ್ನು ಸಂಪರ್ಕಿಸುತ್ತದೆ. ಇದು ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಸಂಪರ್ಕವನ್ನು ಸುಧಾರಿಸಲಿದ್ದು, ಮಹಾತ್ಮ ಗಾಂಧಿ ಸೇತುವೆಯ ಮೇಲಿನ ಸಂಚಾರ ದಟ್ಟಣೆಯನ್ನು ತಗ್ಗಿಸಲಿದೆ.

ಸೇತುವೆಯ ಹೆಸರಿನ ವಿಚಾರಕ್ಕೆ ಭುಗಿಲೆದ್ದ ವಿವಾದ

ಸಿಖ್ಖರ ಹತ್ತನೇ ಗುರುಗಳಾದ ಗುರು ಗೋವಿಂದ್ ಸಿಂಗ್ ಅವರ ಹೆಸರನ್ನು ಈ ಸೇತುವೆಗೆ ಇಡುವ ಬದಲು ‘ನಿತೀಶ್ ಸೇತು’ ಎಂದು ನಾಮಕರಣ ಮಾಡಿರುವುದು ಕಾಂಗ್ರೆಸ್, ಆರ್‌ಜೆಡಿ ಮತ್ತು ಎಎಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಗುರು ಗೋವಿಂದ್ ಸಿಂಗ್ ಅವರ ಹೆಸರಿಡಲು ಪ್ರಸ್ತಾಪಿಸಲಾಗಿದ್ದ ಸೇತುವೆಗೆ ನಿತೀಶ್ ಕುಮಾರ್ ಹೆಸರಿಡುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಟೀಕಿಸಿದ್ದಾರೆ. ಜೆಡಿಯು ನಾಯಕ ನಿತೀಶ್ ಕುಮಾರ್ ಬದುಕಿರುವಾಗಲೇ ಅವರನ್ನು ರಾಜಕೀಯ ಮುಖ್ಯವಾಹಿನಿಯಿಂದ ಬದಿಗೆ ಸರಿಸುವ ಹುನ್ನಾರ ಇದರ ಹಿಂದಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಸೇತುವೆಗೆ ಗುರು ಗೋವಿಂದ್ ಸಿಂಗ್ ಹೆಸರಿಡುವಂತೆ ತಾವು ಈ ಹಿಂದೆ ವಿಧಾನಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದಾಗಿ ತೇಜಸ್ವಿ ಯಾದವ್ ಹೇಳಿದ್ದಾರೆ. ಅಲ್ಲದೆ, ಸುಮಾರು 17 ತಿಂಗಳ ಹಿಂದೆಯೇ ನಿತೀಶ್ ಕುಮಾರ್ ಈ ಸೇತುವೆಯನ್ನು ಉದ್ಘಾಟಿಸಿದ್ದರು, ಈಗ ಪ್ರಧಾನಿ ಮೋದಿ ಮತ್ತೆ ಉದ್ಘಾಟನೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಆದರೆ, ಸದನದಲ್ಲಿ ಅಂತಹ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದು ಬಿಹಾರ ವಿಧಾನಸಭೆ ಸ್ಪಷ್ಟಪಡಿಸಿದೆ.

ಪಂಜಾಬ್ ನಾಯಕರ ವಿರೋಧ

ಪವಿತ್ರ ಕ್ಷೇತ್ರ ‘ತಖ್ತ್ ಶ್ರೀ ಪಟ್ನಾ ಸಾಹಿಬ್’ಗೆ ಈ ಸೇತುವೆ ಸಮೀಪದಲ್ಲೇ ಇರುವುದರಿಂದ, ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಪಂಜಾಬ್ ಸಚಿವ ಹರ್ಪಾಲ್ ಸಿಂಗ್ ಚೀಮಾ ಮತ್ತು ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಒತ್ತಾಯಿಸಿದ್ದಾರೆ.

ಗಮನ ಸೆಳೆದ ‘ಮೋದಿ ಕಾ ಗಮ್ಛಾ’

ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಹೆಗಲ ಮೇಲಿದ್ದ ‘ಗಮ್ಛಾ’ ಬೀಸುವ ಮೂಲಕ 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 243ರಲ್ಲಿ 202 ಸ್ಥಾನಗಳನ್ನು ಗೆದ್ದಾಗ ಪಾಟ್ನಾದಲ್ಲಿ ಸಂಭ್ರಮಿಸಿದ್ದ ಕ್ಷಣವನ್ನು ನೆನಪಿಸಿದರು. ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೈನ್, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮತ್ತು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Must Read

Skip to toolbar