November 22, 2026
Sunday, November 22, 2026
spot_img

ದೋಹಾದಲ್ಲಿ ಭಾರತ ಎ vs ಪಾಕಿಸ್ತಾನ ಎ ಮಹಾಕದನ: ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026 ಟೂರ್ನಿಯ ರೋಚಕ ಪಂದ್ಯದಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಇಂದು ಕತಾರ್‌ನ ದೋಹಾದಲ್ಲಿ ಮುಖಾಮುಖಿಯಾಗಿವೆ. ಮಧ್ಯಾಹ್ನ 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆದಿದ್ದು, ಟಾಸ್ ಗೆದ್ದ ಪಾಕಿಸ್ತಾನ ಎ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಟಾಸ್ ಸೋತ ಭಾರತ ಎ ತಂಡ ಮೊದಲು ಬೌಲಿಂಗ್ ಮಾಡುವ ಸವಾಲು ಸ್ವೀಕರಿಸಿದ್ದು, ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಿದೆ.

ಈ ಟೂರ್ನಿಯಲ್ಲಿ ಉಭಯ ತಂಡಗಳಿಗೂ ಇದು ಎರಡನೇ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು, ಇಂದಿನ ಪಂದ್ಯ ಗೆದ್ದು ಗೆಲುವಿನ ಓಟ ಮುಂದುವರಿಸುವ ಗುರಿ ಹೊಂದಿವೆ. ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಮತ್ತು ಮುಂದಿನ ಹಂತಕ್ಕೆ ಸುಲಭವಾಗಿ ಮುನ್ನಡೆಯಲು ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೇ ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಮತ್ತು ರೋಮಾಂಚನ ಇರುತ್ತದೆ. ದೇಶದ ಭವಿಷ್ಯದ ತಾರೆಗಳೆಂದೇ ಗುರುತಿಸಿಕೊಂಡಿರುವ ಯುವ ಆಟಗಾರರು ತಮ್ಮ ಪ್ರತಿಭೆ ಸಾಬೀತುಪಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ಎ ಬ್ಯಾಟರ್‌ಗಳು ದೊಡ್ಡ ಮೊತ್ತ ಪೇರಿಸುವ ತವಕದಲ್ಲಿದ್ದರೆ, ಭಾರತ ಎ ಬೌಲರ್‌ಗಳು ಎದುರಾಳಿಯನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ತಂತ್ರ ರೂಪಿಸಿದ್ದಾರೆ.

ಎರಡೂ ತಂಡಗಳ ಸಮಬಲದ ಹೋರಾಟದಿಂದಾಗಿ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಯಾರು ಶಿಸ್ತುಬದ್ಧ ಪ್ರದರ್ಶನ ನೀಡುತ್ತಾರೆಯೋ ಅವರಿಗೆ ಗೆಲುವಿನ ನಗೆ ಒಲಿಯಲಿದೆ. ಕ್ರಿಕೆಟ್ ಪ್ರೇಮಿಗಳು ದೋಹಾದಲ್ಲಿ ನಡೆಯುತ್ತಿರುವ ಈ ಯುವ ಕದನವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

Must Read

Skip to toolbar