November 22, 2026
Sunday, November 22, 2026
spot_img

ಎಡವಟ್ಟು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಮೀಸಲಿದ್ದ ಗೌರವ ಓವೈಸಿಗೆ ನೀಡಿದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನ್ಯಾಯಮೂರ್ತಿಗೆ ನೀಡಬೇಕಿದ್ದ ಗೌರವದ ಸಲಾಮ್ ರಾಜಕೀಯ ನಾಯಕರೊಬ್ಬರಿಗೆ ಸಲ್ಲಿಕೆಯಾದರೆ? ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪೊಲೀಸರ ಎಡವಟ್ಟಿನಿಂದ ಇಂತಹ ವಿಚಿತ್ರ ಘಟನೆ ನಡೆದಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯ ಆಗಮನಕ್ಕಾಗಿ ಸಿದ್ಧತೆ ನಡೆಸಿದ್ದ ಪೊಲೀಸ್ ಸಿಬ್ಬಂದಿ, ಸ್ಥಳಕ್ಕೆ ಅನಿರೀಕ್ಷಿತವಾಗಿ ಆಗಮಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಗಾರ್ಡ್ ಆಫ್ ಹಾನರ್ ನೀಡಿದ್ದಾರೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸ್ ಇಲಾಖೆ ತನಿಖೆಗೆ ಆದೇಶಿಸಿದೆ.

ನ್ಯಾಯಮೂರ್ತಿ ಬದಲು ಓವೈಸಿಗೆ ಗೌರವದ ಸಲಾಂ

ಸಹರಾನ್‌ಪುರದ ಸರ್ಕ್ಯೂಟ್ ಹೌಸ್‌ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯ ಆಗಮನದ ಹಿನ್ನೆಲೆಯಲ್ಲಿ ಪೊಲೀಸರು ಗೌರವ ವಂದನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ನ್ಯಾಯಮೂರ್ತಿ ಸ್ಥಳಕ್ಕೆ ಆಗಮಿಸುವ ಮೊದಲೇ ಓವೈಸಿ ಸರ್ಕ್ಯೂಟ್ ಹೌಸ್‌ಗೆ ಬಂದಿದ್ದಾರೆ. ಈ ವೇಳೆ ಸಿಬ್ಬಂದಿ ಗೊಂದಲಕ್ಕೊಳಗಾಗಿ ಅವರಿಗೆ ಗಾರ್ಡ್ ಆಫ್ ಹಾನರ್ ಸಲ್ಲಿಸಿದ್ದಾರೆ ಎನ್ನಲಾಗಿದೆ. ಓವೈಸಿ ಕೂಡ ಪೊಲೀಸರ ಗೌರವ ವಂದನೆಯನ್ನು ಸ್ವೀಕರಿಸಿದ್ದಾರೆ.

ಓವೈಸಿ ಅವರ ಸರ್ಕ್ಯೂಟ್ ಹೌಸ್ ಭೇಟಿ ಪೂರ್ವನಿಗದಿತ ಕಾರ್ಯಕ್ರಮದ ಭಾಗವಾಗಿರಲಿಲ್ಲ ಎನ್ನಲಾಗಿದ್ದು, ಅನಿರೀಕ್ಷಿತ ಆಗಮನದಿಂದ ಈ ಗೊಂದಲ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

2027ರ ಚುನಾವಣೆಗೆ ರಾಜಕೀಯ ಸಿದ್ಧತೆ

ಓವೈಸಿ ಅವರು ಆಜಾದ್ ಸಮಾಜ ಪಕ್ಷ (ಕಾನ್ಶಿರಾಮ್) ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರೊಂದಿಗೆ ಸಹರಾನ್‌ಪುರಕ್ಕೆ ಆಗಮಿಸಿದ್ದರು. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಲು ಜಿಲ್ಲೆಗೆ ಬಂದಿದ್ದರು. ಇತ್ತೀಚೆಗೆ ಇಬ್ಬರೂ ಸೇರಿ ಸಾಮಾಜಿಕ ಪರಿವರ್ತನ್ ಮೋರ್ಚಾ (SPM) ಎಂಬ ರಾಜಕೀಯ ಮೈತ್ರಿಕೂಟವನ್ನು ಘೋಷಿಸಿದ್ದರು.

ಪೊಲೀಸ್ ಇಲಾಖೆಯಿಂದ ತನಿಖೆ

ಘಟನೆಯ ಕುರಿತು ಸಹರಾನ್‌ಪುರ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಗ್ರಾಮೀಣ ವಿಭಾಗದ ಪೊಲೀಸ್ ಅಧೀಕ್ಷಕರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ವಿಚಾರಣೆಯಲ್ಲಿ ಲಭ್ಯವಾಗುವ ಸಾಕ್ಷ್ಯ ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Must Read

Skip to toolbar