ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕಗಳನ್ನು ಸರಿಯಾಗಿ ವಿತರಿಸಿಲ್ಲ ಎಂದು ಮನವಿ ಸಲ್ಲಿಸಲು ಬಂದಿದ್ದ ಯುವಕನೊಬ್ಬನ ಮೇಲೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರವಾಗಿ ರೇಗಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ವರ್ತನೆಗೆ ಸಾರ್ವಜನಿಕ ವಲಯ ಹಾಗೂ ವಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಸಲಿಗೆ ನಡೆದಿದ್ದೇನು?
ಸಚಿವ ಮಧು ಬಂಗಾರಪ್ಪ ಅವರು ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿದ್ದಾಗ, ಎಸ್‌ಡಿಎಂಸಿ ಸಮನ್ವಯ ಸಮಿತಿ ಅಧ್ಯಕ್ಷ ದೇವರಾಜ್ ಕಿನ್ನಾಳ ಅವರು ಶಾಲಾ ಮಕ್ಕಳ ಸಮಸ್ಯೆಗಳ ಕುರಿತು ಮನವಿ ಪತ್ರ ನೀಡಲು ತೆರಳಿದ್ದರು. “ಜಿಲ್ಲೆಯಲ್ಲಿ 21,950 ಮಕ್ಕಳಿಗೆ ಇನ್ನೂ ಶೂ-ಸಾಕ್ಸ್ ಬಂದಿಲ್ಲ, 64 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪಠ್ಯಪುಸ್ತಕಗಳು ತಲುಪಿಲ್ಲ. ಸರ್ಕಾರಿ ಶಾಲೆಗಳನ್ನು ಏಕೆ ಖಾಸಗಿಯವರಿಗೆ ನೀಡುತ್ತಿದ್ದೀರಿ?” ಎಂದು ದೇವರಾಜ್ ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ಸಚಿವರು ಏಕವಚನದಲ್ಲಿ ಕೂಗಾಡಿದ್ದು, “ನಿನಗೆ ಪ್ರಶ್ನೆ ಕೇಳುವ ಯೋಗ್ಯತೆ ಇಲ್ಲ” ಎಂದು ಗದರಿದ್ದಾರೆ ಎಂದು ಆರೋಪಿಸಲಾಗಿದೆ.
ಹೋರಾಟಗಾರರ ಆಕ್ರೋಶ, ಕ್ಷಮೆಯಾಚನೆಗೆ ಪಟ್ಟು
ಮಕ್ಕಳ ಹಕ್ಕುಗಳಿಗಾಗಿ ನ್ಯಾಯಯುತವಾಗಿ ಪ್ರಶ್ನಿಸಿದ ಯುವಕನ ಮೇಲೆ ಸಚಿವರು ದರ್ಪ ತೋರಿರುವುದು ಸರಿಯಲ್ಲ ಎಂದು ಕೊಪ್ಪಳದ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಶಿಕ್ಷಣ ಸಚಿವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ವಿಪಕ್ಷ ನಾಯಕ ಬಿ.ವೈ. ವಿಜಯೇಂದ್ರ ಕಿಡಿ
ಶಿವಮೊಗ್ಗದಲ್ಲಿ ಈ ಘಟನೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, “ಇದ್ದದ್ದನ್ನು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ ಎಂಬಂತಾಗಿದೆ ಶಿಕ್ಷಣ ಸಚಿವರ ವರ್ತನೆ. ಅವರ ಈ ಉದ್ಧಟತನದ ಹೇಳಿಕೆಯನ್ನು ರಾಜ್ಯಾದ್ಯಂತ ಜನರು ಖಂಡಿಸುತ್ತಿದ್ದಾರೆ. ಇಂತಹ ಅವಿವೇಕತನದ ನಡವಳಿಕೆಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಸಚಿವರಿಗೆ ಕಿಂಚಿತ್ತಾದರೂ ಗೌರವವಿದ್ದರೆ ತಕ್ಷಣ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.



