ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಕಾಂಗ್ರೆಸ್ನಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸ್ವಪಕ್ಷೀಯ ಟೀಕಾಕಾರರ ವಿರುದ್ಧ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೀಡಿದ ಹೇಳಿಕೆಯೊಂದು ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಸರ್ಕಾರವನ್ನು ಟೀಕಿಸಿ, ಖಾಸಗಿಯಾಗಿ ಬಂದು ಹೊಗಳುವ ಸ್ವಪಕ್ಷೀಯ ನಾಯಕರ ವಿರುದ್ಧ ಸಿಎಂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನವೆಂಬರ್ 19ರಂದು ಸಿದ್ದಿಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೇವಂತ್ ರೆಡ್ಡಿ,”ನಮ್ಮ ಸರ್ಕಾರ ಇನ್ನೂ ಎರಡು ವರ್ಷ ಇರುತ್ತದೆ. ಯಾವುದಾದರೂ ಕೆಲಸ ಆಗದಿದ್ದರೆ ನಮಗೆ ತಿಳಿಸಿ, ಏನಾದರೂ ಆಗಬೇಕಿದ್ದರೆ ಹೇಳಿ. ಆದರೆ ನಾವು ಒಳ್ಳೆಯ ಕೆಲಸ ಮಾಡಿದ್ದರೆ ಅದನ್ನು ಇಡೀ ಊರಿಗೆ ತಿಳಿಸಿ” ಎಂದು ಜನರಿಗೆ ಕರೆ ನೀಡಿದರು.
ಸ್ವಪಕ್ಷೀಯ ನಾಯಕರಿಗೆ ಸಿಎಂ ತಿರುಗೇಟು
ಕೊರತೆಗಳನ್ನು ಖಾಸಗಿಯಾಗಿ ಚರ್ಚಿಸಬೇಕು, ಸಾಧನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು ಎಂಬ ಹಳೆಯ ಗಾದೆಯನ್ನು ನೆನಪಿಸಿದ ರೆಡ್ಡಿ, “ನಿನ್ನೆ ಮತ್ತು ಮೊನ್ನೆ ನಮ್ಮದೇ ಪಕ್ಷದ ಕೆಲವರು, ಅವರಿಗೆ ಏನಾಗಿದೆಯೋ ಗೊತ್ತಿಲ್ಲ, ಬಹುಶಃ ಹುಚ್ಚು ನಾಯಿ ಕಚ್ಚಿರಬೇಕು. ಮೈಕ್ ಮುಂದೆ ನಿಂತು ಸರ್ಕಾರದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಆದರೆ ನನ್ನ ಮನೆಗೆ ಬಂದು ಕಿವಿಯಲ್ಲಿ ಒಳ್ಳೆಯ ಮಾತುಗಳನ್ನು ಹೇಳುತ್ತಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮನೆಯಲ್ಲಿ ಭುಗಿಲೆದ್ದ ಅಸಮಾಧಾನ
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು ಮೂರು ವರ್ಷಗಳಾಗುತ್ತಿದ್ದು, ಇತ್ತೀಚೆಗೆ ಆಡಳಿತ ಪಕ್ಷದ ಶಾಸಕರು, ಸಂಸದರು ಮತ್ತು ಹಿರಿಯ ನಾಯಕರಲ್ಲೇ ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೆಚ್ಚಾಗುತ್ತಿದೆ.
ಇತ್ತೀಚೆಗಷ್ಟೇ ಮುನುಗೋಡು ಶಾಸಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಅವರು ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿಲ್ಲದ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕೇವಲ ಸಿಎಂ ಪ್ರತಿನಿಧಿಸುವ ಕೊಡಂಗಲ್ ಮತ್ತು ಸಚಿವರ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ಹರಿದುಬರುತ್ತಿದೆ ಎಂದು ಅವರು ಆರೋಪಿಸಿದ್ದರು. ಈ ತಾರತಮ್ಯ ಮುಂದುವರಿದರೆ ರಾಜ್ಯದಲ್ಲಿ ಮತ್ತೊಂದು ರಾಜಕೀಯ ‘ಕುರುಕ್ಷೇತ್ರ’ ನಡೆಯಲಿದೆ ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದರು.



