November 22, 2026
Sunday, November 22, 2026
spot_img

ಆಧಾರ್‌ನಲ್ಲಿರುವ ವಯಸ್ಸು ಅಂತಿಮ ಸಾಕ್ಷ್ಯವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ಜನ್ಮದಿನಾಂಕ ಅಥವಾ ವಯಸ್ಸನ್ನು ಎಲ್ಲ ಕಾನೂನು ವಿಚಾರಗಳಲ್ಲೂ ಅಂತಿಮ ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಮೋಟಾರು ಅಪಘಾತ ಪರಿಹಾರ ಪ್ರಕರಣವೊಂದರ ವಿಚಾರಣೆ ವೇಳೆ ಮೃತ ವ್ಯಕ್ತಿಯ ವಯಸ್ಸು ನಿರ್ಧರಿಸಲು ಆಧಾರ್ ವಿವರಕ್ಕಿಂತ ಮರಣೋತ್ತರ ಪರೀಕ್ಷಾ ವರದಿಯಲ್ಲಿನ ದಾಖಲೆಯನ್ನು ಪರಿಗಣಿಸಿ ನ್ಯಾಯಾಲಯ ಪರಿಹಾರ ಮೊತ್ತವನ್ನು ಹೆಚ್ಚಿಸಿದೆ. ಈ ತೀರ್ಪು ಅಪಘಾತ ಪರಿಹಾರ ಪ್ರಕರಣಗಳಲ್ಲಿ ವಯಸ್ಸಿನ ದಾಖಲೆಗಳ ಮಹತ್ವದ ಕುರಿತು ಗಮನ ಸೆಳೆದಿದೆ.

ಏನಿದು ಪ್ರಕರಣ?

2021ರ ಡಿಸೆಂಬರ್ 18ರಂದು ಮೈಸೂರಿನಿಂದ ಗುರುವಾಯನಕೆರೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೇಸ್ತ್ರಿ ಷರೀಫ್ ಅವರು ಬೇಲೂರು–ಮೂಡಿಗೆರೆ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ಮಂಗಳೂರು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ 26,73,100 ಪರಿಹಾರ ನೀಡಿತ್ತು. ಆದರೆ, ಷರೀಫ್ ಅವರ ಆಧಾರ್ ಕಾರ್ಡ್‌ನಲ್ಲಿ 35 ವರ್ಷ 7 ತಿಂಗಳ ವಯಸ್ಸು ದಾಖಲಾಗಿದ್ದರೆ, ಮರಣೋತ್ತರ ಪರೀಕ್ಷಾ ವರದಿಯಲ್ಲಿ 32 ವರ್ಷ ಎಂದು ನಮೂದಿಸಲಾಗಿತ್ತು. ಆಧಾರ್ ವಿವರವನ್ನು ಆಧರಿಸಿ ಪರಿಹಾರ ಲೆಕ್ಕಾಚಾರ ಮಾಡಿದ್ದನ್ನು ಪ್ರಶ್ನಿಸಿ ಮೃತರ ಪತ್ನಿ ಸಕೀನಾ, ಮಗಳು ಹಾಗೂ ತಾಯಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ:

ಪರಿಹಾರ ಮೊತ್ತ 1.95 ಲಕ್ಷ ಹೆಚ್ಚಳ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರ ಏಕಸದಸ್ಯ ಪೀಠವು ಆಧಾರ್ ಕಾರ್ಡ್ ವಯಸ್ಸಿನ ದೃಢೀಕರಣಕ್ಕೆ ಅಂತಿಮ ಆಧಾರವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು. ವಯಸ್ಸಿಗೆ ಸಂಬಂಧಿಸಿದ ಇತರ ಅಧಿಕೃತ ದಾಖಲೆಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷಾ ವರದಿಯಲ್ಲಿನ ವಯಸ್ಸನ್ನು ಪರಿಗಣಿಸಬಹುದು ಎಂದು ತಿಳಿಸಿತು.

ಇದರಂತೆ, ಕುಟುಂಬಕ್ಕೆ ನೀಡಬೇಕಾದ ಪರಿಹಾರ ಮೊತ್ತವನ್ನು 26,73,100ರಿಂದ 28,68,000ಕ್ಕೆ ಹೆಚ್ಚಿಸಿ ಆದೇಶಿಸಿದೆ. ಹೆಚ್ಚುವರಿ 1.95 ಲಕ್ಷ ಮೊತ್ತಕ್ಕೆ ವಾರ್ಷಿಕ ಶೇ. 6ರ ಬಡ್ಡಿಯನ್ನೂ ಪಾವತಿಸುವಂತೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗೆ ಸೂಚಿಸಿದೆ.

Must Read