November 22, 2026
Sunday, November 22, 2026
spot_img

ಸಫಾರಿ ವಿವಾದಕ್ಕೆ ಟ್ವಿಸ್ಟ್‌; ಸಚಿವರು ಹುಲಿ, ಆನೆ ಬೆನ್ನಟ್ಟಿದ ರೀಲ್ಸ್‌ ಬಂಡೀಪುರದ್ದಲ್ಲ: ಡಿಸಿಎಫ್‌ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಡಿನ ಪ್ರಾಣಿಗಳನ್ನು ಬೆನ್ನಟ್ಟುತ್ತಾ, ಸಫಾರಿ ವಾಹನದಿಂದ ಕೆಳಗಿಳಿದು ಹುಲಿ ಹಾಗೂ ಆನೆಗಳತ್ತ ತೆರಳಿದ ತಮಿಳುನಾಡು ಸಚಿವರ ವರ್ತನೆಗೆ ಸಂಬಂಧಿಸಿದ ವೈರಲ್‌ ವಿಡಿಯೋ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಘಟನೆ ಬಂಡೀಪುರದಲ್ಲಿ ನಡೆದಿರಬಹುದು ಎಂಬ ಆರೋಪಗಳ ನಡುವೆ, ವೈರಲ್‌ ವಿಡಿಯೋದಲ್ಲಿನ ದೃಶ್ಯಗಳು ನೆರೆಯ ತಮಿಳುನಾಡಿನ ಮಧುಮಲೈ ಅರಣ್ಯಕ್ಕೆ ಸಂಬಂಧಿಸಿದ್ದು ಎಂದು ಬಂಡೀಪುರ ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ತಮಿಳುನಾಡು ಸಮಾಜ ಕಲ್ಯಾಣ ಸಚಿವ ವಣ್ಣಿ ಅರಸು ಸಫಾರಿ ವೇಳೆ ಕಾಡಾನೆ ಹಾಗೂ ಹುಲಿಯನ್ನು ಬೆನ್ನಟ್ಟಿ, ಅವುಗಳು ಹೆದರಿ ಓಡುವಂತೆ ಮಾಡುತ್ತಾ ರೀಲ್ಸ್‌ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ದೃಶ್ಯಗಳು ಬಂಡೀಪುರದಲ್ಲಿ ನಡೆದಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.

ಇದನ್ನೂ ಓದಿ:

ಈ ಕುರಿತು ಮಾತನಾಡಿರುವ ಬಂಡೀಪುರ ಡಿಸಿಎಫ್‌ ನಂದೀಶ್‌, ಸಚಿವರು ನ.10ರಂದು ಬಂಡೀಪುರದಲ್ಲಿ ಸಫಾರಿ ನಡೆಸಿದ್ದು ನಿಜ. ಆದರೆ, ವೈರಲ್‌ ವಿಡಿಯೋದಲ್ಲಿ ಪ್ರಾಣಿಗಳನ್ನು ಬೆನ್ನಟ್ಟುವ ದೃಶ್ಯಗಳು ಬಂಡೀಪುರದಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಡಿಯೋದಲ್ಲಿ ಬಂಡೀಪುರದ ಸಫಾರಿ ವಾಹನ ಕಾಣಿಸಿಕೊಂಡಿರುವುದು ನಿಜ. ಆದರೆ, ಬಂಡೀಪುರದಲ್ಲಿ ಸಫಾರಿ ಮಾಡುವಾಗ ಬಳಸಿದ ವಾಹನದ ದೃಶ್ಯ ಹಾಗೂ ಮಧುಮಲೈ ಅರಣ್ಯದಲ್ಲಿ ಸಚಿವರು ವಾಹನದಿಂದ ಇಳಿದು ಪ್ರಾಣಿಗಳತ್ತ ತೆರಳಿದ ದೃಶ್ಯಗಳನ್ನು ಸೇರಿಸಿ ರೀಲ್ಸ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬಂಡೀಪುರದಲ್ಲಿ ಸಫಾರಿ ವೇಳೆ ಪ್ರವಾಸಿಗರು ಅಥವಾ ಇತರರು ವಾಹನದಿಂದ ಕೆಳಗಿಳಿಯಲು ಅವಕಾಶವಿಲ್ಲ. ಪ್ರಾಥಮಿಕ ತನಿಖೆಯಲ್ಲೂ ಈ ಘಟನೆ ಬಂಡೀಪುರದಲ್ಲಿ ನಡೆದಿರುವುದು ಕಂಡುಬಂದಿಲ್ಲ. ಆದರೂ, ಸಫಾರಿ ವಾಹನದ ಡ್ಯಾಶ್‌ ಕ್ಯಾಮೆರಾ ದೃಶ್ಯಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ಡಿಸಿಎಫ್‌ ಹೇಳಿದ್ದಾರೆ.

Must Read

Skip to toolbar