ಹೊಸದಿಗಂತ ವರದಿ ಉಳ್ಳಾಲ:
ಸಂಸ್ಕಾರ, ಸಂಸ್ಕೃತಿ ಹಾಗೂ ಶಿಕ್ಷಣದಲ್ಲಿ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯಬೇಕು. ಮಕ್ಕಳಿಗೆ ಜೀವನದಲ್ಲಿ ಉತ್ತಮ ಮಾರ್ಗದರ್ಶನ ದೊರೆಯುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ 9ನೇ, 10ನೇ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸೇವಾ ಪ್ರಮುಖರಾದ ಪರಾಗ್ ಅಭ್ಯಂಕರ್ ಹೇಳಿದರು.
ಕಿನ್ಯ ಕೇಶವ ಶಿಶು ಮಂದಿರ ಚಾರಿಟೇಬಲ್ ಟ್ರಸ್ಟ್ ಹಾಗೂ ಕೇಶವ ಶಿಶು ಮಂದಿರ ಕಿನ್ಯ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಡೆಯಲಿರುವ ತರಬೇತಿ ತರಗತಿಗಳನ್ನು (ಟ್ಯೂಷನ್ ಕ್ಲಾಸ್) ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ:
ವಿದ್ಯಾರ್ಥಿಗಳಿಗೆ ವಾರದಲ್ಲಿ ಐದು ದಿನ ತರಬೇತಿ ತರಗತಿಗಳನ್ನು ನಡೆಸುವ ಉದ್ದೇಶವಿದೆ. ಖಾಸಗಿ ಸಂಸ್ಥೆಗಳಿಂದ ಟ್ಯೂಷನ್ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳೂ ಇಲ್ಲಿ ಉಚಿತವಾಗಿ ತರಬೇತಿ ಪಡೆಯಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವ ಪ್ರದೇಶಗಳಲ್ಲಿಯೇ ಅವರ ಅನುಕೂಲಕ್ಕೆ ತಕ್ಕಂತೆ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ವಿಶೇಷ ತರಬೇತಿ ತರಗತಿಗಳ ಮೂಲಕ ಮಕ್ಕಳು ಪ್ರತಿಭಾವಂತರಾಗಿ ಬೆಳೆಯಬೇಕು. ಎಲ್ಲ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಿನ್ಯ ಕೇಶವ ಶಿಶುಮಂದಿರದ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ಸಾಂತ್ಯಗುತ್ತು, ಅಧ್ಯಕ್ಷ ಸುಂದರ್ ಅಂಚನ್, ಉಪಾಧ್ಯಕ್ಷ ಸುಧಾಕರ ಆಳ್ವ ಸಾಂತ್ಯಗುತ್ತು, ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಕಾರ್ಯವಾಹ ಸಾಗರ್ ಮಾಡೂರು, ಸಹ ಕಾರ್ಯವಾಹ ಮಂಜುನಾಥ್ ನಾರ್ಲ, ಕೇಶವ ಶಿಶುಮಂದಿರದ ಮಾತೃ ಮಂಡಳಿ ಅಧ್ಯಕ್ಷೆ ನಯನ ಪಾರ್ಥಸಾರಥಿ, ಮಾತಾಜಿ ಅಶ್ವಿನಿ ಲತೀಶ್ ಪಿಲಿಕೂರು ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸೇವಾ ಪ್ರಮುಖ ಅಶೋಕ್ ಕೊಣಾಜೆ ಸ್ವಾಗತಿಸಿ, ನಿರೂಪಿಸಿದರು. ಕೇಶವ ಶಿಶುಮಂದಿರದ ವ್ಯವಸ್ಥಾಪಕ ನಾರಾಯಣ ಕಜೆ ವಂದಿಸಿದರು.



