ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಎಂಟು ತಿಂಗಳ ಗರ್ಭಿಣಿಯ ತ್ರಿವಳಿ ಶಿಶುಗಳ ಪೈಕಿ ಎರಡು ಮಕ್ಕಳು ಮೃತಪಟ್ಟಿದ್ದು, ಉಳಿದ ಒಂದು ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕುಟುಂಬಸ್ಥರು ಆಸ್ಪತ್ರೆಯ ಚಿಕಿತ್ಸಾ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಶ್ವರ್ಯ ಎಂಬ ಗರ್ಭಿಣಿ ಸುಮಾರು ಒಂದು ವಾರದ ಹಿಂದೆ ಮಲಬದ್ಧತೆ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಮನೆಗೆ ಕಳುಹಿಸಲಾಗಿತ್ತು ಎನ್ನಲಾಗಿದೆ. ಆದರೆ, ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ 21ರಂದು ಒಂದು ಮಗು ಮೃತಪಟ್ಟಿದ್ದು, ಇಂದು (ನ.22) ಮತ್ತೊಂದು ಮಗು ಕೂಡ ಸಾವನ್ನಪ್ಪಿದೆ. ಉಳಿದ ಮಗು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಇದನ್ನೂ ಓದಿ:
ಒಂದು ಮಗು ಮೃತಪಟ್ಟ ಬಳಿಕ ಉಳಿದ ಎರಡು ಮಕ್ಕಳನ್ನಾದರೂ ಉಳಿಸಲು ವೈದ್ಯರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಿನ್ನೆ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿ ಗರ್ಭಿಣಿಯನ್ನು ಉಪವಾಸ ಇರಿಸಲಾಗಿತ್ತು. ಆದರೆ, ರಾತ್ರಿ ಸರ್ಜರಿಯನ್ನು ಮುಂದೂಡಲಾಗಿತ್ತು. ಇಂದು ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಿದರೂ ಎರಡು ಶಿಶುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ದೂರಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಗೆ ಬೆಡ್ ವ್ಯವಸ್ಥೆ ಮಾಡದೆ ಲೇಬರ್ ರೂಮ್‌ನಲ್ಲಿ ನೆಲದ ಮೇಲೆ ಮಲಗುವ ಪರಿಸ್ಥಿತಿ ಎದುರಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.



