ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ರಾಜತಾಂತ್ರಿಕ ಹಾಗೂ ಕಾರ್ಯತಂತ್ರದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಐರೋಪ್ಯ ರಾಷ್ಟ್ರದ ವಿದೇಶಾಂಗ ಸಚಿವ ಟಾಮ್ ಬೆರೆಂಡ್ಸೆನ್ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ ನವದೆಹಲಿಗೆ ಆಗಮಿಸಿದ ಅವರನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ವಾಗತಿಸಿದ್ದು, ಉಭಯ ದೇಶಗಳ ನಡುವಿನ ಸಹಕಾರ ವಿಸ್ತರಣೆಗೆ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ನವೆಂಬರ್ 22 ಮತ್ತು 23ರಂದು ನಡೆಯಲಿರುವ ಭೇಟಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಬೆರೆಂಡ್ಸೆನ್ ಮಾತುಕತೆ ನಡೆಸಲಿದ್ದಾರೆ. ಭದ್ರತೆ, ತಂತ್ರಜ್ಞಾನ, ಜಾಗತಿಕ ಸವಾಲುಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.
ಭಾರತಕ್ಕೆ ಆಗಮಿಸಿದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಬೆರೆಂಡ್ಸೆನ್, ಭಾರತ ಮತ್ತು ನೆದರ್ಲ್ಯಾಂಡ್ಸ್ ಹಲವು ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿವೆ ಎಂದು ಹೇಳಿದ್ದಾರೆ. ಎರಡೂ ದೇಶಗಳು ಎದುರಿಸುತ್ತಿರುವ ಸವಾಲುಗಳು, ದ್ವಿಪಕ್ಷೀಯ ಸಂಬಂಧಗಳ ವಿಸ್ತರಣೆ ಹಾಗೂ ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ರೂಪ ನೀಡುವ ಕುರಿತು ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಜೈಶಂಕರ್ ಜೊತೆ ಮೊದಲ ವಿದೇಶಾಂಗ ಸಚಿವರ ಸಭೆ
ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಮೊದಲ ವಿದೇಶಾಂಗ ಸಚಿವರ ಸಭೆಯಲ್ಲಿ ಇಬ್ಬರೂ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ. ವ್ಯಾಪಾರ, ತಂತ್ರಜ್ಞಾನ, ಭದ್ರತೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಆಳಗೊಳಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ:
ಭೇಟಿಯ ಕೊನೆಯ ದಿನವಾದ ಸೋಮವಾರ ಬೆರೆಂಡ್ಸೆನ್ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನೂ ಭೇಟಿಯಾಗಲಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಕ್ಷೇತ್ರಗಳಿಗೆ ಸಂಬಂಧಿಸಿದ ವಿಚಾರಗಳು ಈ ಭೇಟಿಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
ವ್ಯಾಪಾರ, ಸೆಮಿಕಂಡಕ್ಟರ್ ಮತ್ತು ರಕ್ಷಣಾ ಸಹಕಾರಕ್ಕೆ ಒತ್ತು
ಇತ್ತೀಚಿನ ತಿಂಗಳುಗಳಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ವ್ಯಾಪಾರ ಹಾಗೂ ತಂತ್ರಜ್ಞಾನ ಸಂಬಂಧಿತ ಮಾತುಕತೆಗಳು ವೇಗ ಪಡೆದಿವೆ. ಸೆಮಿಕಂಡಕ್ಟರ್ ವಲಯದಲ್ಲಿ ಸಹಕಾರ, ಉದ್ಯಮ ಹೂಡಿಕೆ ಮತ್ತು ರಕ್ಷಣಾ ಸಂಬಂಧಗಳನ್ನು ವಿಸ್ತರಿಸುವ ಕುರಿತು ಎರಡೂ ದೇಶಗಳು ನಿರಂತರವಾಗಿ ಸಮಾಲೋಚನೆ ನಡೆಸುತ್ತಿವೆ.



