November 23, 2026
Monday, November 23, 2026
spot_img

ನಟನಾ ಶಾಲೆಯಲ್ಲಿ ಕಣ್ಣೀರಿಟ್ಟಿದ್ದ ದೀಪಿಕಾ: ತೆರೆಮರೆಯ ಅಸಲಿ ಕಥೆ ಬಿಚ್ಚಿಟ್ಟ ಅನುಪಮ್ ಖೇರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಹಿರಿಯ ನಟ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಅನುಪಮ್ ಖೇರ್ ನಟನೆ ಮಾತ್ರವಲ್ಲದೆ, ‘ಆಕ್ಟರ್ ಪ್ರಿಪೇರ್ಸ್’ ಎಂಬ ಜನಪ್ರಿಯ ನಟನಾ ಶಾಲೆಯನ್ನೂ ನಡೆಸುತ್ತಿದ್ದಾರೆ. ಇಂದಿನ ಬಹುತೇಕ ಹೆಸರಾಂತ ತಾರೆಯರು ಈ ಶಾಲೆಯಲ್ಲಿ ಪಳಗಿದವರೇ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು, ತಮ್ಮ ಶಾಲೆಯ ಎರಡನೇ ಬ್ಯಾಚ್ ವಿದ್ಯಾರ್ಥಿನಿಯಾಗಿದ್ದ ದೀಪಿಕಾ ಪಡುಕೋಣೆ ಅವರ ಆರಂಭಿಕ ದಿನಗಳ ಘಟನೆಯನ್ನು ಹಂಚಿಕೊಂಡಿದ್ದಾರೆ.

ನಟನಾ ತರಗತಿಗೆ ಸೇರಿದಾಗ ದೀಪಿಕಾ ಹೆಸರಾಂತ ಮಾಡೆಲ್ ಆಗಿದ್ದರು. ಅಚ್ಚುಕಟ್ಟಾದ ಹಿನ್ನೆಲೆಯಿಂದ ಬಂದಿದ್ದ ಅವರ ನಡೆ-ನುಡಿ, ದೇಹ ಭಾಷೆಯಲ್ಲಿ ಒಂದು ರೀತಿಯ ಘನತೆ ಮತ್ತು ಶಿಸ್ತು ಎದ್ದು ಕಾಣುತ್ತಿತ್ತು. ಪ್ರತಿ ಹೆಜ್ಜೆಯಲ್ಲೂ ಒಂದು ಸ್ಟೈಲ್ ಇರುತ್ತಿತ್ತು. ಒಮ್ಮೆ ಅನುಪಮ್ ಖೇರ್ ಅವರು, ದೀಪಿಕಾಗೆ ಮನೆ ಕೆಲಸದವಳ ಪಾತ್ರ ನೀಡಿ ನೆಲ ಒರೆಸುವಂತೆ ಸೂಚಿಸಿದರು. ತಮ್ಮ ಎಂದಿನ ಅಚ್ಚುಕಟ್ಟಾದ ಶೈಲಿಯಲ್ಲೇ ದೀಪಿಕಾ ನೆಲ ಒರೆಸಿದರು. ಆದರೆ, ಆ ಪಾತ್ರದ ಜೀವಂತಿಕೆ ಅದರಲ್ಲಿರಲಿಲ್ಲ. ಪಾತ್ರಕ್ಕೆ ತಕ್ಕಂತೆ ಬದಲಾಗುವವರೆಗೆ ಅದನ್ನೇ ಮಾಡುವಂತೆ ಗುರು ಕಟ್ಟುನಿಟ್ಟಾಗಿ ಹೇಳಿದರು.

ಗುರುವಿನ ಈ ಕಠಿಣ ಮಾತುಗಳಿಂದ ದೀಪಿಕಾ ಅವರ ಕಣ್ಣಲ್ಲಿ ನೀರು ಬಂತು. ಮನಸ್ಸಿನಲ್ಲಿ ಬೇಸರ ಮತ್ತು ಕೋಪವೂ ಮೂಡಿರಬಹುದು. ಆದರೂ ಅವರು ಸೋಲಲಿಲ್ಲ. ಪಾತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕಂತೆ ನಟಿಸಿ ತೋರಿಸಿದರು. ಕೋರ್ಸ್ ಮುಗಿದ ಬಳಿಕ ಅದೇ ದೀಪಿಕಾ, ತಮ್ಮ ಗುರುವಿಗೆ ಮನದುಂಬಿ ಧನ್ಯವಾದ ಹೇಳಿ ಹೊರಟರು.

‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ದೀಪಿಕಾ, ಇಂದು ಯಾವುದೇ ಪಾತ್ರವನ್ನಾದರೂ ಸಲೀಸಾಗಿ ನಿಭಾಯಿಸುವ ಮಹಾನ್ ತಾರೆಯಾಗಿ ಬೆಳೆದಿದ್ದಾರೆ. ಸ್ಟಾರ್ ಪಟ್ಟದ ಹಿಂದಿರುವ ಇಂತಹ ಶಿಸ್ತು ಮತ್ತು ಶ್ರಮ, ಹೊಸ ಕಲಾವಿದರಿಗೆ ದೊಡ್ಡ ಪಾಠವಾಗಿದೆ.

Must Read

Skip to toolbar