November 23, 2026
Monday, November 23, 2026
spot_img

ಅಯೋಧ್ಯೆ-ಜನಕಪುರ ಧಾಮ ಸಂಪರ್ಕಿಸುವ ‘ಸರಯೂ-ಕಮಲಾ ಎಕ್ಸ್‌ಪ್ರೆಸ್’ ರೈಲಿಗೆ ಮೋದಿ, ಬಾಲೆನ್ ಶಾ ಹಸಿರು ನಿಶಾನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ಮತ್ತು ನೇಪಾಳ ನಡುವಿನ ಸಾಂಸ್ಕೃತಿಕ ಹಾಗೂ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಉತ್ತರ ಪ್ರದೇಶದ ಅಯೋಧ್ಯೆ ಕ್ಯಾಂಟ್ ಮತ್ತು ನೇಪಾಳದ ಜನಕಪುರ ಧಾಮವನ್ನು ಸಂಪರ್ಕಿಸುವ ವಾರಕ್ಕೊಮ್ಮೆ ಸಂಚರಿಸುವ ‘ಸರಯೂ-ಕಮಲಾ ಎಕ್ಸ್‌ಪ್ರೆಸ್’ ಪ್ರಯಾಣಿಕರ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳ ಪ್ರಧಾನಿ ಬಾಲೇಂದ್ರ ‘ಬಾಲೆನ್’ ಶಾ ಸೋಮವಾರ ಜಂಟಿಯಾಗಿ ಹಸಿರು ನಿಶಾನೆ ತೋರಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಭಾರತ ಮತ್ತು ನೇಪಾಳದ ನಡುವಿನ ಸಂಬಂಧವು ನಂಬಿಕೆ, ಹಂಚಿಕೆಯ ನದಿಗಳು ಮತ್ತು ಶತಮಾನಗಳಷ್ಟು ಹಳೆಯದಾದ ‘ರೋಟಿ-ಬೇಟಿ’ ಬಾಂಧವ್ಯದ ಮೇಲೆ ನಿಂತಿದೆ ಎಂದು ಬಣ್ಣಿಸಿದರು.

ರೈಲಿನ ಮಾರ್ಗ ಮತ್ತು ನಿಲುಗಡೆಗಳು

ಈ ಹೊಸ ರೈಲು ಉತ್ತರ ಪ್ರದೇಶ ಮತ್ತು ಬಿಹಾರದ ಪ್ರಮುಖ ನಗರಗಳ ಮೂಲಕ ಸಂಚರಿಸಲಿದ್ದು, ಗೋರಖ್‌ಪುರ, ಬಸ್ತಿ, ರಕ್ಸಾಲ್, ಸೀತಾಮರ್ಹಿ, ಮಧುಬನಿ ಮತ್ತು ಜಯನಗರ ನಿಲ್ದಾಣಗಳಲ್ಲಿ ಪ್ರಮುಖ ನಿಲುಗಡೆ ಹೊಂದಿರಲಿದೆ. ಇದರಿಂದ ಹಲವು ಜಿಲ್ಲೆಗಳ ಪ್ರಯಾಣಿಕರಿಗೆ ಹಾಗೂ ಎರಡೂ ದೇಶಗಳ ನಡುವೆ ಸಂಚರಿಸುವ ಭಕ್ತರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಉತ್ತೇಜನ

ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಹೊಂದಿರುವ ಅಯೋಧ್ಯೆ ಹಾಗೂ ಜನಕಪುರ ಧಾಮಕ್ಕೆ ನೇರ ರೈಲು ಸಂಪರ್ಕ ಸಿಕ್ಕಿರುವುದರಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ದೊರೆಯಲಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚುವುದರಿಂದ ಈ ಭಾಗದ ಹೋಟೆಲ್, ಸಾರಿಗೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ರೈಲ್ವೆ ಸಹಕಾರ ವಿಸ್ತರಣೆ

ಉಭಯ ದೇಶಗಳ ನಡುವೆ ಜಯನಗರ-ಬಿಜಲ್ಪುರ-ಬರ್ದಿಬಾಸ್ ಮತ್ತು ಜೋಗ್ಬನಿ-ವಿರಾಟನಗರ ರೈಲು ಯೋಜನೆಗಳು ಹಂತ ಹಂತವಾಗಿ ಪ್ರಗತಿಯಲ್ಲಿದ್ದು, ಉದ್ದೇಶಿತ ರಕ್ಸಾಲ್-ಕಠ್ಮಂಡು ರೈಲು ಮಾರ್ಗವೂ ಸಹಕಾರದ ಭಾಗವಾಗಿದೆ. ಅಲ್ಲದೆ, ವಡೋದರಾದ ಗತಿ ಶಕ್ತಿ ವಿಶ್ವವಿದ್ಯಾಲಯದಲ್ಲಿ ನೇಪಾಳ ರೈಲ್ವೆ ಅಧಿಕಾರಿಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ.

Must Read

Skip to toolbar