ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಂಟೆಯಲ್ಲಿ ಮುಳುಗಿ ತಾಯಿ ಹಾಗೂ ಮಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನ ಬನಶಂಕರಿ ನಿವಾಸಿಗಳಾದ ಸಲ್ಮಾ ಹಾಗೂ ಅವರ ಮಗಳು ಸಾದಿಕಾ ಮೃತರು. ಮೂಲತಃ ನಿಮ್ಮಕಾಯಲಹಳ್ಳಿ ಗ್ರಾಮದವರಾಗಿದ್ದ ಸಲ್ಮಾ ಅವರು ತವರು ಗ್ರಾಮಕ್ಕೆ ಮಗಳೊಂದಿಗೆ ಬಂದಿದ್ದರು. ಹೊರವಲಯದಲ್ಲಿರುವ ಕುಂಟೆಯ ಬಳಿ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಕುಂಟೆಯ ಬಳಿ ಆಕಸ್ಮಿಕವಾಗಿ ಕಾಲು ಜಾರಿ ಮಗಳು ಸಾದಿಕಾ ನೀರಿಗೆ ಬಿದ್ದಿದ್ದಾಳೆ. ಮಗಳನ್ನು ರಕ್ಷಿಸಲು ಸಲ್ಮಾ ಕೂಡ ನೀರಿಗೆ ಹಾರಿದ್ದಾಳೆ. ಆದರೆ ಕುಂಟೆ ಆಳವಾಗಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಾಯಿ-ಮಗಳ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಸ್ಥಳಕ್ಕೆ ಬಟ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



