November 24, 2026
Tuesday, November 24, 2026
spot_img

ಬಂಗಾರದ ದರ ಗಗನಮುಖಿ, ಬೆಳ್ಳಿ ದರ ಯಥಾಸ್ಥಿತಿ: ಖರೀದಿದಾರರ ಜೇಬಿಗೆ ಕತ್ತರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನದ ಬೆಲೆ ಏರಿಕೆಯ ಓಟ ಮುಂದುವರಿದಿದೆ. ಮಂಗಳವಾರದ ವಹಿವಾಟಿನಲ್ಲಿ ಬಂಗಾರದ ದರದಲ್ಲಿ ಪ್ರತಿ ಗ್ರಾಮ್‌ಗೆ 115 ರೂಪಾಯಿ ಹೆಚ್ಚಳವಾಗಿದೆ. ಸೋಮವಾರವಷ್ಟೇ ಇದರ ಬೆಲೆ 135 ರೂಪಾಯಿ ಏರಿತ್ತು. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿ ಚಿನ್ನದ ದರದಲ್ಲಿ ಬರೋಬ್ಬರಿ 250 ರೂಪಾಯಿಗಳಷ್ಟು ಏರಿಕೆಯಾದಂತಾಗಿದೆ.

ಚಿನ್ನದ ಬೆಲೆ ಏರಿಕೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದೇಶಗಳಲ್ಲೂ ಹಲವೆಡೆ ಬಂಗಾರದ ದರ ಏರುಮುಖವಾಗಿದೆ. ಜಾಗತಿಕ ಮಟ್ಟದಲ್ಲಿ ಗೋಲ್ಡ್ ಫ್ಯೂಚರ್ಸ್ ದರಗಳೂ ಹೆಚ್ಚಳ ಕಂಡಿದ್ದು, ದೇಶೀಯ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರಿದೆ. ಹೂಡಿಕೆದಾರರು ಮತ್ತೆ ಸುರಕ್ಷಿತ ಹೂಡಿಕೆಯತ್ತ ಮುಖ ಮಾಡಿರುವುದು ಈ ಏರಿಕೆಗೆ ಪ್ರಮುಖ ಕಾರಣವಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಪ್ರಸ್ತುತ 10 ಗ್ರಾಮ್‌ನ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,17,150 ರೂಪಾಯಿ ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ದರ 1,27,800 ರೂಪಾಯಿಗೆ ತಲುಪಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ 10 ಗ್ರಾಮ್ ಚಿನ್ನದ ಬೆಲೆ 1,17,150 ರೂಪಾಯಿ ಆಗಿದೆ. ಚಿನ್ನ ಖರೀದಿಸಲು ಮುಂದಾಗಿದ್ದ ಮದುವೆ ಹಾಗೂ ಹಬ್ಬದ ಸಿದ್ಧತೆಯಲ್ಲಿರುವ ಜನರಿಗೆ ಈ ನಿರಂತರ ಏರಿಕೆ ತುಸು ಹೊರೆಯನ್ನೇ ತಂದಿದೆ.

ಒಂದೆಡೆ ಬಂಗಾರದ ದರ ದಿನೇದಿನೇ ಏರುತ್ತಿದ್ದರೆ, ಮತ್ತೊಂದೆಡೆ ಬೆಳ್ಳಿ ಬೆಲೆ ಸದ್ಯಕ್ಕೆ ಯಥಾಸ್ಥಿತಿಯಲ್ಲಿದೆ. 100 ಗ್ರಾಮ್ ಬೆಳ್ಳಿಯ ದರ 17,500 ರೂಪಾಯಿ ಇದೆ. ಬೆಂಗಳೂರಿನಲ್ಲೂ 100 ಗ್ರಾಮ್ ಬೆಳ್ಳಿ ಬೆಲೆ 17,500 ರೂಪಾಯಿಯಲ್ಲೇ ಮುಂದುವರಿದಿದೆ. ಅಷ್ಟೇ ಅಲ್ಲದೆ, ನೆರೆಯ ತಮಿಳುನಾಡು, ಕೇರಳ ಸೇರಿದಂತೆ ವಿವಿಧ ಕಡೆಗಳಲ್ಲೂ ಬೆಳ್ಳಿ ಬೆಲೆ 17,500 ರೂಪಾಯಿ ಆಸುಪಾಸಿನಲ್ಲೇ ಸ್ಥಿರವಾಗಿದೆ. ಒಟ್ಟಿನಲ್ಲಿ ಚಿನ್ನದ ದರದ ಏರಿಕೆಯ ನಡುವೆ ಬೆಳ್ಳಿ ದರ ಸ್ಥಿರವಾಗಿರುವುದು ಆ ಲೋಹದ ಖರೀದಿದಾರರಿಗೆ ಕೊಂಚ ನೆಮ್ಮದಿ ನೀಡಿದೆ.

Must Read

Skip to toolbar