November 24, 2026
Tuesday, November 24, 2026
spot_img

ಸೋನಿಯಾ ಗಾಂಧಿಗೆ ಕಾನೂನು ನೋಟಿಸ್: ಸಾವರ್ಕರ್ ಕುರಿತ ಉಲ್ಲೇಖಗಳಿಗೆ ಕ್ಷಮೆಯಾಚಿಸುವಂತೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ನೆನಪಿನ ಚರಿತ್ರೆ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಕುರಿತು ಮಾಡಿರುವ ಉಲ್ಲೇಖಗಳು ಇದೀಗ ವಿವಾದಕ್ಕೆ ಕಾರಣವಾಗಿವೆ. ಈ ಸಂಬಂಧ ಪುಸ್ತಕದಲ್ಲಿನ ಕೆಲವು ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸಾವರ್ಕರ್‌ ಅವರ ಸಹೋದರನ ಮೊಮ್ಮಗ ಸತ್ಯಕಿ ಸಾವರ್ಕರ್‌, ಸೋನಿಯಾ ಗಾಂಧಿ ಅವರಿಗೆ ವಕೀಲರ ಮೂಲಕ ಕಾನೂನು ನೋಟಿಸ್‌ ಕಳುಹಿಸಿದ್ದಾರೆ.

ಸೋನಿಯಾ ಗಾಂಧಿ ಅವರ ʼಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್ʼ ಪುಸ್ತಕದ 201ನೇ ಪುಟದಲ್ಲಿರುವ ಹೇಳಿಕೆಗೆ ನೋಟಿಸ್‌ನಲ್ಲಿ ಪ್ರಮುಖವಾಗಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಸಾವರ್ಕರ್‌ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬ್ರಿಟಿಷ್‌ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು ಅಥವಾ ಅವರ ವಿರುದ್ಧ ಬ್ರಿಟಿಷರಿಗೆ ಸಹಕರಿಸುತ್ತಿದ್ದರು ಎಂಬ ಅರ್ಥವನ್ನು ಈ ಹೇಳಿಕೆ ನೀಡುತ್ತದೆ. ಇದು ಸಾವರ್ಕರ್‌ ಅವರ ಜೀವನ ಮತ್ತು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ತಪ್ಪಾಗಿ ಬಿಂಬಿಸುತ್ತದೆ ಎಂಬುದು ಸತ್ಯಕಿ ಸಾವರ್ಕರ್‌ ಅವರ ಆರೋಪವಾಗಿದೆ.

ಇನ್ನು ಪುಸ್ತಕದ 443ನೇ ಪುಟದಲ್ಲಿರುವ ಸಾವರ್ಕರ್‌ ಅವರ ಹಿಂದೂತ್ವ ಸಿದ್ಧಾಂತದ ವಿವರಣೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಭಾರತದಲ್ಲಿ ಹಿಂದೂಗಳೇ ಸರ್ವೋಚ್ಚರು ಎಂಬ ದೃಷ್ಟಿಕೋನವಾಗಿ ಹಿಂದೂತ್ವವನ್ನು ಬಿಂಬಿಸಿರುವುದು ಅವರ ರಾಜಕೀಯ ಮತ್ತು ಸೈದ್ಧಾಂತಿಕ ಚಿಂತನೆಗಳನ್ನು ಸರಿಯಾಗಿ ಪ್ರತಿನಿಧಿಸುವುದಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಾವರ್ಕರ್‌ ಅವರ ಬರಹಗಳು, ಭಾಷಣಗಳು ಮತ್ತು ರಾಜಕೀಯ ನಿಲುವುಗಳನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ಅರ್ಥಮಾಡಿಕೊಳ್ಳಬೇಕು. ಒಂದು ವಾಕ್ಯದ ಮೂಲಕ ಅವರ ಸಂಪೂರ್ಣ ಸಿದ್ಧಾಂತವನ್ನು ವಿವರಿಸುವುದು ಸರಿಯಲ್ಲ ಎಂಬುದು ಸತ್ಯಕಿ ಸಾವರ್ಕರ್‌ ಅವರ ವಾದವಾಗಿದೆ.

ಈ ಹಿನ್ನೆಲೆಯಲ್ಲಿ ಸಾವರ್ಕರ್‌ ಅವರ ಗೌರವ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಪುಸ್ತಕದಿಂದ ತೆಗೆದುಹಾಕುವಂತೆ ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ವಿವಾದಿತ ಹೇಳಿಕೆಗಳಿಗೆ ಬೇಷರತ್‌ ಕ್ಷಮೆಯಾಚಿಸಬೇಕು, ಅವುಗಳ ಐತಿಹಾಸಿಕ ಹಿನ್ನೆಲೆ ಮತ್ತು ಆಧಾರಗಳನ್ನು ಸ್ಪಷ್ಟಪಡಿಸಬೇಕು ಹಾಗೂ ಪ್ರಕಾಶಕರೊಂದಿಗೆ ಚರ್ಚಿಸಿ ಮುಂದಿನ ಆವೃತ್ತಿಗಳಲ್ಲಿ ಆಕ್ಷೇಪಾರ್ಹ ಅಂಶಗಳನ್ನು ತಿದ್ದುಪಡಿ ಮಾಡಬೇಕು ಅಥವಾ ತೆಗೆದುಹಾಕಬೇಕು ಎಂದು ಆಗ್ರಹಿಸಲಾಗಿದೆ.

ನೋಟಿಸ್‌ ಸ್ವೀಕರಿಸಿದ 15 ದಿನಗಳೊಳಗೆ ಈ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಸತ್ಯಕಿ ಸಾವರ್ಕರ್‌ ಎಚ್ಚರಿಕೆ ನೀಡಿದ್ದಾರೆ.

Must Read