ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಜಪಾನ್ನಿಂದಲೇ ಅಪ್ಡೇಟ್ ಪಡೆದುಕೊಂಡಿದ್ದಾರೆ. ವಿಡಿಯೋ ಕರೆ ಮೂಲಕ ಆಶಾ ಕಾರ್ಯಕರ್ತೆಯರ ಜೊತೆ ಚರ್ಚೆ ಮಾಡಿದ್ದು, ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ಸಿಎಂ ಡಿಕೆಶಿ, ರೈಲಿನಲ್ಲಿ ಪ್ರಯಾಣ ಮಾಡುತ್ತಾ ವಿಡಿಯೋ ಕರೆ ಮೂಲಕ ಆಶಾ ಕಾರ್ಯಕರ್ತೆಯರ ಮುಖಂಡರ ಜೊತೆ ಮಾತನಾಡಿದ್ದಾರೆ. ನಿಮ್ಮ ಬಗ್ಗೆ ನನಗೆ ಕಾಳಜಿ ಇದೆ. ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಪ್ರತಿಭಟನೆ ಕೈಬಿಟ್ಟು ಎಲ್ಲರೂ ಮನೆಗೆ ತೆರಳಿ. ನನ್ನ ಮೇಲೆ ವಿಶ್ವಾಸ ಇಡಿ ಎಂದು ಮನವಿ ಮಾಡಿದ್ದಾರೆ.
ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಸಮಯಾವಕಾಶ ನೀಡಿ. ನಿಮ್ಮ ಕೋಪ ಬಿಡಿ. ನನ್ನ ಮನವಿ ಒಪ್ಪಿಕೊಳ್ಳಿ. ಇದೇ ರೀತಿ ಚಳಿಯಲ್ಲಿ ರಾತ್ರಿಯಿಡೀ ಕುಳಿತರೆ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ.ಅತ್ತ ಅಂಗನವಾಡಿ ಕಾರ್ಯಕರ್ತೆಯರು ದೆಹಲಿಗೆ ಹೋಗಲು ತಯಾರಿ ಮಾಡುತ್ತಿದ್ದಾರೆ. ಬೇರೆ ಇಲಾಖೆಗೆ ಸಂಬಂಧಿಸಿದಂತೆ ಬೇರೆ ಬೇರೆ ಬೇಡಿಕೆಗಳಿದ್ದು, ಅಧಿವೇಶನ ಸಂದರ್ಭದಲ್ಲಿ ನಾನು ನಿಮ್ಮ ಬೇಡಿಕೆ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚಿಸುತ್ತೇನೆ ಎಂದಿದ್ದಾರೆ.
ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಭೇಟಿ
ಒಸಾಕಾದಲ್ಲಿರುವ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಕರ್ನಾಟಕದ ನಿಯೋಗದೊಂದಿಗೆ ಮಂಗಳವಾರ ಭೇಟಿ ನೀಡಿದ್ದಾರೆ. ನಗರ ತ್ಯಾಜ್ಯವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಇಂಧನವಾಗಿ ಪರಿವರ್ತಿಸುವ ಜಪಾನ್ನ ವ್ಯವಸ್ಥೆಯನ್ನು ವೀಕ್ಷಿಸಿದ್ದು, ಸ್ವಚ್ಛ ಹಾಗೂ ಸುಸ್ಥಿರ ಕರ್ನಾಟಕ ನಿರ್ಮಾಣಕ್ಕೆ ಇಂತಹ ಜಾಗತಿಕ ಮಾದರಿಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ, ಮೈಶಿಮಾ ಘಟಕವು ಪ್ರತಿದಿನ ಸುಮಾರು 900 ಟನ್ ನಗರ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. 2001ರಿಂದ ಕಾರ್ಯನಿರ್ವಹಿಸುತ್ತಿರುವ ಈ ಘಟಕದಲ್ಲಿ ಎರಡು ದಹನ ಯಂತ್ರಗಳಿದ್ದು, ಪ್ರತಿದಿನ ಸಂಸ್ಕರಿಸುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ ಎಂದು ಹೇಳಿದ್ದಾರೆ.



