ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿಯ ಜನರಲ್ ತಿಮ್ಮಯ್ಯ (ಜಿ.ಟಿ) ವೃತ್ತದಲ್ಲಿ ಪ್ರತಿಭಟನೆ, ಧರಣಿ, ಮೆರವಣಿಗೆ ಹಾಗೂ ಮಾನವ ಸರಪಳಿ ನಡೆಸುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
ಜನರಲ್ ತಿಮ್ಮಯ್ಯ(ಜಿ.ಟಿ) ವೃತ್ತವು ಮಡಿಕೇರಿ ನಗರದಿಂದ ಹೊರ ಹೋಗಲು ಹಾಗೂ ಮಡಿಕೇರಿ ನಗರದೊಳಗೆ ಬರಲು ಮುಖ್ಯ ರಸ್ತೆಯಾಗಿರುತ್ತದೆ. ಹಾಗೂ NH 275ರ ರಾಷ್ಟ್ರೀಯ ಹೆದ್ದಾರಿಯಾಗಿರುತ್ತದೆ. ಅಲ್ಲದೆ ಮೈಸೂರಿನಿಂದ ಮಡಿಕೇರಿ, ಮಂಗಳೂರು, ಮೂರ್ನಾಡು ಕಡೆಗೆ ಹೋಗಲು ಹಾಗೂ ಮಂಗಳೂರಿನಿಂದ ಮಡಿಕೇರಿ, ಮೈಸೂರು, ಮೂರ್ನಾಡು ಕಡೆಗೆ ಜಿ.ಟಿ ವೃತ್ತದ ಮೂಲಕವೇ ಹೋಗಬೇಕಾಗಿರುತ್ತದೆ.
ಆದರೆ ಇಲ್ಲಿ ಪ್ರತಿಭಟನೆ, ಧರಣಿ, ಮುಷ್ಕರ, ಮಾನವ ಸರಪಳಿಯನ್ನು ನಡೆಸುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುವುದರಿಂದ ಮಡಿಕೇರಿ ನಗರದ ಜಿ.ಟಿ ವೃತ್ತದಲ್ಲಿ ನಡೆಸದಂತೆ ಅಧಿಸೂಚನೆ ಹೊರಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೋರಿದ್ದರು.
ಅವರ ಕೋರಿಕೆಯಂತೆ ಸಾರ್ವಜನಿಕ ಮತ್ತು ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಕಾಯ್ದೆ-1963 ಕಲಂ 31(1), ಮೋಟಾರು ವಾಹನಗಳ ಕಾಯ್ದೆ-1988 ಕಲಂ 115 ಹಾಗೂ ಕರ್ನಾಟಕ ವಾಹನಗಳ ನಿಯಮ-1989 (ತಿದ್ದುಪಡಿ ನಿಯಮ-1990)ರ ನಿಯಮ 221ಎ(5), ಬಿ.ಎನ್.ಎಸ್.ಎಸ್-2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮುಂದಿನ ಆದೇಶದವರೆಗೆ ಜಾರಿಯಲ್ಲಿರುವಂತೆ ಮಡಿಕೇರಿ ನಗರದ ಜಿ.ಟಿ ವೃತ್ತದಲ್ಲಿ ಯಾವುದೇ ಪ್ರತಿಭಟನೆ, ಧರಣಿ, ಮುಷ್ಕರ, ಮಾನವ ಸರಪಳಿಯನ್ನು ನಡೆಸದಂತೆ ನಿರ್ಬಂಧಿಸಿ ಆದೇಶಿಸಿದ್ದಾರೆ.



