November 24, 2026
Tuesday, November 24, 2026
spot_img

26 ವರುಷಗಳ ಬಳಿಕ ಮತ್ತೆ ಬರ್ತಿದೆ ‘Gold Spot’: 90ರ ದಶಕದ ನೆನಪುಗಳಿಗೆ ಸಿಗಲಿದೆ ಹೊಸ ಕಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

80 ಮತ್ತು 90ರ ದಶಕದಲ್ಲಿ ಬಾಲ್ಯ ಕಳೆದವರಿಗೆ ‘ಗೋಲ್ಡ್ ಸ್ಪಾಟ್’ (Gold Spot) ಎಂದರೆ ಅದೊಂದು ಕೇವಲ ತಂಪು ಪಾನೀಯವಲ್ಲ, ಅದೊಂದು ಮರೆಯಲಾಗದ ಮಧುರ ನೆನಪು. ಸುಡುವ ಬೇಸಿಗೆಯ ಮಧ್ಯಾಹ್ನದ ದಣಿವನ್ನೆಲ್ಲಾ ಕ್ಷಣಮಾತ್ರದಲ್ಲಿ ಮಾಯ ಮಾಡುತ್ತಿದ್ದ ಆ ಕಿತ್ತಳೆ ಬಣ್ಣದ ಪಾನೀಯ ಬರೋಬ್ಬರಿ 26 ವರ್ಷಗಳ ಸುದೀರ್ಘ ವಿರಾಮದ ಬಳಿಕ ಮತ್ತೆ ಮಾರುಕಟ್ಟೆಗೆ ಮರಳಲು ಸಜ್ಜಾಗಿದೆ.

ವರದಿಯ ಪ್ರಕಾರ, ದೈತ್ಯ ಪಾನೀಯ ಸಂಸ್ಥೆ ಕೋಕಾ-ಕೋಲಾ ಈ ಐತಿಹಾಸಿಕ ಬ್ರ್ಯಾಂಡ್‌ಗೆ ಮರುಜೀವ ನೀಡಲು ಸಿದ್ಧತೆ ನಡೆಸಿದೆ. 1993ರಲ್ಲಿ ಪಾರ್ಲೆ ಸಮೂಹದಿಂದ ಕೋಕಾ-ಕೋಲಾ ಈ ಬ್ರ್ಯಾಂಡ್ ಅನ್ನು ಖರೀದಿಸಿತ್ತು. ಇದೀಗ ಇಂದಿನ ಜನರ ಆರೋಗ್ಯ ಕಾಳಜಿ ಮತ್ತು ಬದಲಾದ ಅಭಿರುಚಿಗೆ ತಕ್ಕಂತೆ ‘ಕಡಿಮೆ ಸಕ್ಕರೆ’ ಅಥವಾ ‘ಸಕ್ಕರೆ ರಹಿತ’ ಅವತಾರದಲ್ಲಿ ಗೋಲ್ಡ್ ಸ್ಪಾಟ್ ಮುಂದಿನ ವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದ್ದು ಕಳೆದ ವಾರಾಂತ್ಯದಲ್ಲಿ. ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಆ ಫೋಟೋದಲ್ಲಿ ಅವರ ಮುಂದಿದ್ದ ಟೇಬಲ್ ಮೇಲೆ ಗೋಲ್ಡ್ ಸ್ಪಾಟ್ ಕ್ಯಾನ್‌ಗಳು ಕಾಣಿಸಿಕೊಂಡಿದ್ದವು. ಧೋನಿ ಈ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಅಭಿಮಾನಿಗಳ ಕಣ್ಣಿಗೆ ಈ ಪಾನೀಯ ಬಿದ್ದಿದ್ದೇ ತಡ, ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಯಾಗಿದೆ.

ಕೋಕಾ-ಕೋಲಾ ಸಂಸ್ಥೆಯಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೂ, ಸಾಮಾಜಿಕ ಜಾಲತಾಣಗಳಲ್ಲಿ 90ರ ದಶಕದ ಯುವಜನತೆ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ. “ಆ ಮೊದಲ ಗುಟುಕಿಗಾಗಿ ಕಾತರದಿಂದ ಕಾಯುತ್ತಿದ್ದೇವೆ” ಎಂದು ನೆಟ್ಟಿಗರು ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ, ಹಳೆಯ ಸ್ವಾದ ಮತ್ತು ಹೊಸ ಆರೋಗ್ಯಕರ ರೂಪದೊಂದಿಗೆ ಗೋಲ್ಡ್ ಸ್ಪಾಟ್ ಮತ್ತೆ ಮನೆಮಾತಾಗಲು ಸಿದ್ಧವಾಗಿದೆ.

Must Read

Skip to toolbar