ಹೊಸದಿಗಂತ ಡಿಜಿಟಲ್ ಡೆಸ್ಕ್:
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ಅಬಾಧಿತವಾಗಿದ್ದು, ಮುಂಬರುವ ಸಭೆಗಳಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಉಭಯ ಪಕ್ಷಗಳ ನಡುವಿನ ಮುಂದಿನ ಸುತ್ತಿನ ಮಹತ್ವದ ಮಾತುಕತೆ ನವೆಂಬರ್ 27ರಂದು ನಡೆಯುವ ಸಾಧ್ಯತೆಯಿದೆ.
ಕಾಂಗ್ರೆಸ್ಗೆ 26 ಸೀಟುಗಳ ಆಫರ್?
ಇಂಡಿಯಾ ಮೈತ್ರಿಕೂಟದ ಈ ಎರಡು ಮಿತ್ರಪಕ್ಷಗಳ ನಡುವೆ ಸಕಾರಾತ್ಮಕ ದಿಕ್ಕಿನಲ್ಲಿ ಮಾತುಕತೆ ಸಾಗುತ್ತಿದೆ ಎಂದು ಎರಡೂ ಪಕ್ಷಗಳ ನಾಯಕರು ಸುಳಿವು ನೀಡಿದ್ದಾರೆ. ಎರಡನೇ ಸುತ್ತಿನ ಮಾತುಕತೆಗೂ ಮುನ್ನ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ 26 ಸ್ಥಾನಗಳನ್ನು ಬಿಟ್ಟುಕೊಡಲು ಎಸ್ಪಿ ಪ್ರಸ್ತಾವನೆ ಮುಂದಿಟ್ಟಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮಣಿಸಲು ಹೊಂದಾಣಿಕೆಗೆ ಸಿದ್ಧ: ಅಖಿಲೇಶ್ ಯಾದವ್
ಇದಕ್ಕೂ ಮುನ್ನ ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, “ಸೀಟು ಹಂಚಿಕೆ ಕುರಿತು ನಮ್ಮ ಪಕ್ಷದ ಹಿರಿಯ ನಾಯಕರು ಚರ್ಚೆಯಲ್ಲಿ ತೊಡಗಿದ್ದಾರೆ. ಎಷ್ಟು ಸ್ಥಾನಗಳಿಗೆ ಒಪ್ಪಿಗೆ ಸೂಚಿಸಬೇಕು ಮತ್ತು ಯಾವ ಪಕ್ಷ ಎಲ್ಲಿ ಗೆಲ್ಲಬಹುದು ಎಂಬುದರ ಕುರಿತು ಪರಿಶೀಲನೆ ನಡೆಯುತ್ತಿದೆ. ಮೈತ್ರಿ ಮಾಡಿಕೊಳ್ಳುವುದರ ಏಕೈಕ ಉದ್ದೇಶ ಗೆಲುವು ಮಾತ್ರ” ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯನ್ನು ಎದುರಿಸಲು ತಮ್ಮ ಪಕ್ಷವು ಹೊಂದಾಣಿಕೆಗೆ ಸಿದ್ಧವಿದೆ ಎಂದ ಅಖಿಲೇಶ್, “ಮುಂದಿರುವ ಹೋರಾಟ ದೊಡ್ಡದಿದೆ. ಬಿಜೆಪಿಯಂತಹ ರಾಜಕೀಯ ‘ಯಂತ್ರ’ದ ವಿರುದ್ಧ ನಾವು ಗೆಲ್ಲಲೇಬೇಕಾದರೆ, ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಬೇಕು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ಸಮಾಜವಾದಿ ಪಕ್ಷವು ಹೊಂದಾಣಿಕೆ ಮಾಡಿಕೊಳ್ಳಲು ಬದ್ಧವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ:
ಚುನಾವಣಾ ಆಯೋಗ, ಇವಿಎಂ ಬಗ್ಗೆ ಅಖಿಲೇಶ್ ಕಳವಳ
ಇದೇ ವೇಳೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಖಿಲೇಶ್ ಯಾದವ್, “ಸಾಂವಿಧಾನಿಕ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಆದರೆ, ಬಿಜೆಪಿಯು ಸುಮಾರು 3 ಕೋಟಿ ಮತಗಳನ್ನು ಹೆಚ್ಚುವರಿಯಾಗಿ ಸೇರಿಸಲು ಯೋಜಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ಇವಿಎಂಗಳನ್ನು ಇರಿಸಲಾಗಿರುವ ಗೋದಾಮುಗಳಲ್ಲಿ ಯಂತ್ರಗಳನ್ನು ‘ಸರ್ವೀಸ್’ ಮಾಡಲು ಚುನಾವಣಾ ಆಯೋಗ ನೇಮಿಸಿರುವ ಎಂಜಿನಿಯರ್ಗಳು ಯಾರು ಎಂಬುದೇ ಯಾರಿಗೂ ತಿಳಿದಿಲ್ಲ” ಎಂದು ಆರೋಪಿಸಿದರು.



