ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಜಗತ್ತು ಎಂದೂ ಕಂಡರಿಯದಂತಹ ಅಬ್ಬರದ ಬ್ಯಾಟಿಂಗ್ ಪ್ರದರ್ಶನವೊಂದಕ್ಕೆ ದೋಹಾದ ಕ್ರೀಡಾಂಗಣ ಸಾಕ್ಷಿಯಾಗಿದೆ. ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭಾರತ ‘ಎ’ ತಂಡದ ಪರ ಕಣಕ್ಕಿಳಿದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಯುಎಇ ಬೌಲರ್ಗಳ ಬೆವರಿಳಿಸಿ ಪುರುಷರ ‘ಲಿಸ್ಟ್ ಎ’ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ದ್ವಿಶತಕ ಸಿಡಿಸಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಯುಎಇ ನೀಡಿದ್ದ 250 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ‘ಎ’ ಪರ ಆರಂಭದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೈಭವ್, ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಈ ಮೂಲಕ 2024ರಲ್ಲಿ ಚಾಡ್ ಬೋಸ್ (103 ಎಸೆತ) ಬರೆದಿದ್ದ ದಾಖಲೆಯನ್ನು ಅರ್ಧದಷ್ಟು ಎಸೆತಗಳ ಅಂತರದಿಂದ ಅಳಿಸಿಹಾಕಿದರು. ಒಟ್ಟು 53 ಎಸೆತಗಳನ್ನು ಎದುರಿಸಿದ ವೈಭವ್, ಬರೋಬ್ಬರಿ 28 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 204 ರನ್ ಚಚ್ಚಿದರು. ಇವರ ಏಕಾಂಗಿ ಆಟದ ಬಲದಿಂದ ಭಾರತ ಕೇವಲ 14.2 ಓವರ್ಗಳಲ್ಲಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ವೈಭವ್ ಬ್ಯಾಟ್ ಬೀಸಿದ ವೇಗಕ್ಕೆ ಮೈದಾನದಲ್ಲಿದ್ದವರ ಕಣ್ಣು ಮಂಜಾಗಿತ್ತು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಈ ಪೋರ, 28ನೇ ಎಸೆತಕ್ಕೆ ಶತಕದ ಗಡಿ ದಾಟಿದರು. ಅಲ್ಲಿಗೂ ನಿಲ್ಲದ ಇವರ ರನ್ ದಾಹ, 40 ಎಸೆತಗಳಲ್ಲಿ 150 ರನ್ ಹಾಗೂ 52 ಎಸೆತಗಳಲ್ಲಿ ಐತಿಹಾಸಿಕ 200 ರನ್ಗಳ ಗಡಿಯನ್ನು ತಲುಪಿತು.
ವೈಭವ್ ಅವರ ಈ ಭಯಾನಕ ಬ್ಯಾಟಿಂಗ್ ಕಂಡು ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. “ಅಸಂಭವ, ಅಸಂಭವ!” ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದರೆ, ಬಿಹಾರ ಮೂಲದ ಈ ಯುವ ಪ್ರತಿಭೆಯನ್ನು ಕೊಂಡಾಡಲು “ಏಕ್ ಬಿಹಾರಿ ಸಬ್ ಪರ್ ಭಾರಿ” ಎಂಬ ಘೋಷಣೆಗಳು ಟ್ರೆಂಡ್ ಆಗುತ್ತಿವೆ. ಇನ್ನು ಕೆಲವರು, “ವೈಭವ್ ಸೂರ್ಯವಂಶಿ ಬ್ಯಾಟಿಂಗ್ ನೋಡುತ್ತಿದ್ದರೆ, ಯಾರೋ ವಿಡಿಯೋ ಗೇಮ್ನಲ್ಲಿ ‘ಈಸಿ ಮೋಡ್’ ಅಥವಾ ಚೀಟ್ ಕೋಡ್ ಹಾಕಿ ಆಡಿದಂತಿದೆ” ಎಂದು ತಮಾಷೆಯ ಮೀಮ್ಸ್ ಹಂಚಿಕೊಳ್ಳುತ್ತಿದ್ದಾರೆ.
ಹಿರಿಯ ಆಟಗಾರರ ಮಟ್ಟದ ಬೌಲಿಂಗ್ ದಾಳಿಯನ್ನು 15ರ ಪೋರನೊಬ್ಬ ಇಷ್ಟು ಸುಲಭವಾಗಿ ಚಿಂದಿ ಉಡಾಯಿಸಿರುವುದು ಕ್ರಿಕೆಟ್ ಪಂಡಿತರನ್ನೇ ಬೆರಗುಗೊಳಿಸಿದೆ. ಕಳೆದ 24 ಗಂಟೆಗಳಿಂದ ಭಾರತದಾದ್ಯಂತ ಗೂಗಲ್ ಸರ್ಚ್ನಲ್ಲಿ ವೈಭವ್ ಸೂರ್ಯವಂಶಿ ಅವರ ಹೆಸರು ಮತ್ತು ಈ ಪಂದ್ಯದ ಹೈಲೈಟ್ಸ್ ಅಗ್ರಸ್ಥಾನದಲ್ಲಿ ಟ್ರೆಂಡ್ ಆಗುತ್ತಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಅಧ್ಯಾಯವೊಂದನ್ನು ಈ ಯುವ ಬ್ಯಾಟರ್ ಬರೆದಿದ್ದಾರೆ.



