ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಬಿಸಿ ಇದೀಗ ಕ್ರಿಕೆಟ್ ಅಂಗಳಕ್ಕೂ ವ್ಯಾಪಿಸಿದಂತಿದೆ. ಎರಡು ದೇಶಗಳ ನಡುವಿನ ಪಂದ್ಯವೆಂದರೆ ಕೇವಲ ಬ್ಯಾಟ್-ಬಾಲ್ ಸಮರವಾಗಿರದೆ, ಆಟಗಾರರ ನಡುವಿನ ಪ್ರತಿಷ್ಠೆಯ ಕಾಳಗವೂ ಆಗುತ್ತಿದೆ. 2025ರ ಏಷ್ಯಾಕಪ್ನಲ್ಲಿ ಕಾಣಿಸಿಕೊಂಡಿದ್ದ ವಿವಾದದ ನೆನಪು ಮಾಸುವ ಮುನ್ನವೇ, 2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಮತ್ತೊಂದು ಸಂಘರ್ಷ ಸದ್ದು ಮಾಡಿದೆ.
ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವಿನ ಪಂದ್ಯದ ವೇಳೆ ನಡೆದ ಮಾತಿನ ಚಕಮಕಿ ಇದೀಗ ಅಧಿಕೃತ ದೂರಿನವರೆಗೂ ತಲುಪಿದೆ. ಭಾರತದ ವೇಗಿ ಹರ್ಷಿತ್ ರಾಣಾ ವಿರುದ್ಧ ಪಾಕಿಸ್ತಾನ ತಂಡ ಮ್ಯಾಚ್ ರೆಫರಿಗೆ ದೂರು ನೀಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
ಮೈದಾನದಲ್ಲೇ ಸ್ಲೆಡ್ಜಿಂಗ್ ಸಮರ
ನವೆಂಬರ್ 22ರಂದು ನಡೆದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಎ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ಈ ವೇಳೆ ಹರ್ಷಿತ್ ರಾಣಾ ಪದೇಪದೆ ಎದುರಾಳಿ ಬ್ಯಾಟರ್ಗಳನ್ನು ಕೆಣಕುವ ರೀತಿಯಲ್ಲಿ ವರ್ತಿಸಿದ್ದರು ಎನ್ನಲಾಗಿದೆ. ಇದಕ್ಕೆ ಪಾಕಿಸ್ತಾನದ ಆಟಗಾರರೂ ತಿರುಗೇಟು ನೀಡಿದ್ದು, ಮೈದಾನದಲ್ಲಿ ಎರಡೂ ತಂಡಗಳ ನಡುವೆ ಮಾತಿನ ಸಮರವೇ ನಡೆದಿತ್ತು.
ಇದನ್ನೂ ಓದಿ:
ಭಾರತ ಎ ತಂಡ ಬ್ಯಾಟಿಂಗ್ ಮಾಡುವಾಗಲೂ ಪರಿಸ್ಥಿತಿ ಬದಲಾಗಲಿಲ್ಲ. ಹರ್ಷಿತ್ ರಾಣಾ ಔಟಾದ ಬಳಿಕ ಪಾಕಿಸ್ತಾನದ ಆಟಗಾರರು ಅವರನ್ನು ಕೆಣಕಲು ಮುಂದಾಗಿದ್ದರು. ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಅಂಪೈರ್ ಮಧ್ಯಪ್ರವೇಶಿಸಿ ಆಟಗಾರರನ್ನು ಸಮಾಧಾನಪಡಿಸಬೇಕಾಯಿತು.
ಹರ್ಷಿತ್ ರಾಣಾ ವಿರುದ್ಧ ಅಧಿಕೃತ ದೂರು
ಘಟನೆಯ ಬಳಿಕ ಪಾಕಿಸ್ತಾನ ಎ ತಂಡದ ಆಡಳಿತ ಮಂಡಳಿ ಮ್ಯಾಚ್ ರೆಫರಿ ನಯೀಮ್-ಉರ್-ರಶೀದ್ ಅವರನ್ನು ಸಂಪರ್ಕಿಸಿದೆ. ಹರ್ಷಿತ್ ರಾಣಾ ಸೇರಿದಂತೆ ಭಾರತದ ಕೆಲವು ಆಟಗಾರರ ವರ್ತನೆ ಕುರಿತು ದೂರು ಸಲ್ಲಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಶಿಸ್ತು ಕ್ರಮದ ಬಗ್ಗೆಯೂ ಸ್ಪಷ್ಟನೆ ಹೊರಬಿದ್ದಿಲ್ಲ.
ಫೈನಲ್ನಲ್ಲಿ ಮತ್ತೊಂದು ಮುಖಾಮುಖಿ?
ಇನ್ನು ಪಂದ್ಯದ ಫಲಿತಾಂಶದಲ್ಲಿ ಪಾಕಿಸ್ತಾನ ಎ ತಂಡ ಮೇಲುಗೈ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿ 313 ರನ್ ಗಳಿಸಿದ್ದ ಪಾಕಿಸ್ತಾನಕ್ಕೆ ಉತ್ತರವಾಗಿ ನಾಯಕ ತಿಲಕ್ ವರ್ಮಾ ಶತಕ ಸಿಡಿಸಿದರೂ ಭಾರತ ಎ ತಂಡ 265 ರನ್ಗಳಿಗೆ ಕುಸಿದು ಸೋಲು ಕಂಡಿತ್ತು.
ಆದರೆ ಟೂರ್ನಿಯ ಕಥೆ ಇಲ್ಲಿಗೇ ಮುಗಿದಿಲ್ಲ. ಎರಡೂ ತಂಡಗಳು ಫೈನಲ್ಗೆ ಪ್ರವೇಶಿಸಿದರೆ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಈಗಾಗಲೇ ವಿವಾದದಿಂದ ಸುದ್ದಿಯಾಗಿರುವ ಈ ಪಂದ್ಯಾವಳಿಯಲ್ಲಿ ಫೈನಲ್ನಲ್ಲೂ ಭಾರತ-ಪಾಕ್ ಕಾದಾಟ ನಡೆದರೆ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಲಿದೆ.



