November 25, 2026
Wednesday, November 25, 2026
spot_img

ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ: 2,000 ಕೋಟಿ ಕ್ಲಬ್‌ಗೆ ಲಗ್ಗೆ ಇಡಲಿದೆಯೇ ‘ರಾಮಾಯಣ’?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಭಾಗ-1’ ಸಿನಿಮಾ ಜಾಗತಿಕ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಮಂಗಳವಾರದ ವೇಳೆಗೆ ಈ ಚಿತ್ರವು ಜಾಗತಿಕವಾಗಿ ಬರೋಬ್ಬರಿ 1,700 ಕೋಟಿ ರೂಪಾಯಿ ಗಳಿಸುವ ಮೂಲಕ, ಈ ಹಿಂದಿನ ‘ಧುರಂಧರ್: ದಿ ರಿವೆಂಜ್’ ಚಿತ್ರದ 1,679 ಕೋಟಿ ರೂಪಾಯಿಗಳ ದಾಖಲೆಯನ್ನು ಮುರಿದು ಮುನ್ನುಗ್ಗಿದೆ.

ಚಿತ್ರದ ಒಟ್ಟು ಗಳಿಕೆಯಲ್ಲಿ ಭಾರತೀಯ ಮಾರುಕಟ್ಟೆಯಿಂದ 1,129 ಕೋಟಿ ರೂಪಾಯಿ ಹರಿದುಬಂದಿದ್ದರೆ, ವಿದೇಶಿ ಮಾರುಕಟ್ಟೆಗಳಿಂದ 571 ಕೋಟಿ ರೂಪಾಯಿ ಸಂಗ್ರಹವಾಗಿದೆ. ಚಿತ್ರಮಂದಿರಗಳಲ್ಲಿ ‘ರಾಮಾಯಣ’ದ ಅಬ್ಬರ ಇನ್ನೂ ತಗ್ಗಿಲ್ಲ. ಮುಂದಿನ ದಿನಗಳಲ್ಲಿ ಭಾರತದಿಂದ ಇನ್ನೂ 100 ಕೋಟಿ ರೂಪಾಯಿ ಹಾಗೂ ವಿದೇಶಗಳಿಂದ 50 ಕೋಟಿ ರೂಪಾಯಿಗೂ ಅಧಿಕ ಗಳಿಕೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಚಿತ್ರದ ಮೊದಲ ಹಂತದ ಒಟ್ಟು ಗಳಿಕೆ 1,850 ಕೋಟಿ ರೂಪಾಯಿ ತಲುಪುವ ಅಂದಾಜಿದೆ.

ಸದ್ಯ ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ದಾಖಲೆ ಅಮೀರ್ ಖಾನ್ ಅವರ ‘ದಂಗಲ್’ (1,910 ಕೋಟಿ ರೂ.) ಹೆಸರಿನಲ್ಲಿದೆ. ‘ರಾಮಾಯಣ’ ಚಿತ್ರವು ಮುಂದಿನ ವರುಷ ಚೀನಾ, ಜಪಾನ್, ಕೊರಿಯಾ, ತೈವಾನ್ ಮತ್ತು ರಷ್ಯಾದಲ್ಲಿ ಬಿಡುಗಡೆಯಾಗಲಿದೆ. ‘ದಂಗಲ್’ ದಾಖಲೆಯನ್ನು ಹಿಂದಿಕ್ಕಲು ರಾಮಾಯಣಕ್ಕೆ ಕೇವಲ 50-60 ಕೋಟಿ ರೂಪಾಯಿಗಳ ಅಗತ್ಯವಿದ್ದು, ಈ ವಿದೇಶಿ ಮಾರುಕಟ್ಟೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಚಿತ್ರವು ಸುಲಭವಾಗಿ 2,000 ಕೋಟಿ ರೂಪಾಯಿಗಳ ಐತಿಹಾಸಿಕ ಮೈಲಿಗಲ್ಲನ್ನು ದಾಟಲಿದೆ.

ಹಿಂದಿ ಮತ್ತು ತೆಲುಗು ಮಾರುಕಟ್ಟೆಗಳಲ್ಲಿ ಈ ಚಿತ್ರವು ನಿರೀಕ್ಷಿತ ಮಟ್ಟಕ್ಕಿಂತ ತುಸು ಕಡಿಮೆ ಪ್ರದರ್ಶನ ನೀಡಿದೆ. ಒಂದು ವೇಳೆ ಈ ಎರಡು ಭಾಷೆಗಳಲ್ಲಿ ನಿರೀಕ್ಷೆಯಂತೆ ಗಳಿಕೆಯಾಗಿದ್ದರೆ, ‘ರಾಮಾಯಣ’ ತನ್ನ ಮೊದಲ ಬಿಡುಗಡೆಯಲ್ಲೇ 2,000 ಕೋಟಿ ರೂಪಾಯಿಗಳ ಗಡಿಯನ್ನು ಸುಲಭವಾಗಿ ತಲುಪುತ್ತಿತ್ತು ಎಂಬುದು ಸಿನಿಮಾ ವಿಶ್ಲೇಷಕರ ಅಭಿಪ್ರಾಯವಾಗಿದೆ.

Must Read