November 25, 2026
Wednesday, November 25, 2026
spot_img

ಸಿಎಂ ಜೊತೆ ವಿಡಿಯೋ ಕಾಲ್‌ನಲ್ಲೂ ಬಗೆಹರಿಯದ ಸಮಸ್ಯೆ: 9ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರೊಟೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಹಲವು ದಿನಗಳಿಂದ ಚಳಿ, ಗಾಳಿ ಹಾಗೂ ಬಿಸಿಲನ್ನೂ ಲೆಕ್ಕಿಸದೆ ಹೋರಾಟ ನಡೆಸುತ್ತಿದ್ದ ಕಾರ್ಯಕರ್ತೆಯರಿಗೆ ಇದೀಗ ಮಳೆಯೂ ಅಡ್ಡಿಯಾಗಿದೆ. ಆದರೆ, ಎಷ್ಟೇ ಮಳೆ ಬಂದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿರುವ ಗುಲಾಬಿ ಸೇನೆ ಪ್ರತಿಭಟನೆ ಮುಂದುವರಿಸಿದೆ.

ಒಂದೆಡೆ ಧಾರಾಕಾರ ಮಳೆ, ಮತ್ತೊಂದೆಡೆ ಜಲಾವೃತಗೊಂಡ ಪ್ರತಿಭಟನಾ ಸ್ಥಳ. ಆದರೂ ಆಶಾ ಕಾರ್ಯಕರ್ತೆಯರ ಹೋರಾಟದ ಉತ್ಸಾಹ ಮಾತ್ರ ಕುಗ್ಗಿಲ್ಲ. ಮಳೆಗೆ ಸೆಡ್ಡು ಹೊಡೆದು ನಿಂತಿರುವ ಕಾರ್ಯಕರ್ತೆಯರು, ತಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಿನ್ನೆ ಜಪಾನ್‌ ಪ್ರವಾಸದಲ್ಲಿರುವ ಸಿಎಂ ಡಿ.ಕೆ. ಶಿವಕುಮಾರ್‌ ವಿಡಿಯೋ ಕರೆ ಮೂಲಕ ಆಶಾ ಕಾರ್ಯಕರ್ತೆಯರ ಬಳಿ ಮಾತನಾಡಿ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ ಲಿಖಿತ ಭರವಸೆ ಸಿಗುವವರೆಗೂ ಜಾಗದಿಂದ ಕದಲುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.

ಕಳೆದ ಎಂಟು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ 15 ಸಾವಿರ ರೂ. ಗೌರವಧನ ನೀಡುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸುತ್ತಿದ್ದಾರೆ. ಈ ನಡುವೆ ಸುರಿದ ಮಳೆಯಿಂದಾಗಿ ಪ್ರತಿಭಟನಾ ವೇದಿಕೆಯ ಪೆಂಡಲ್‌ ಕೂಡ ಸೋರುತ್ತಿದೆ. ಹೀಗಾಗಿ ಕಾರ್ಯಕರ್ತೆಯರು ಟಾರ್ಪಲ್‌ ಹಿಡಿದು ಮಳೆಯಿಂದ ರಕ್ಷಣೆ ಪಡೆಯುವಂತಾಗಿದೆ.

ಪ್ರತಿಭಟನೆಯಲ್ಲಿ ಮಕ್ಕಳನ್ನೂ ಜೊತೆಯಲ್ಲಿ ಕರೆತಂದಿರುವ ಕಾರ್ಯಕರ್ತೆಯರು ಮಳೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಸರ್ಕಾರದ ಭರವಸೆ, ಮತ್ತೊಂದೆಡೆ ತಮ್ಮ ಬೇಡಿಕೆ ಈಡೇರಬೇಕೆಂಬ ಕಾರ್ಯಕರ್ತೆಯರ ಪಟ್ಟು ಮುಂದುವರಿದಿದೆ. ಆರೋಗ್ಯ ಹದಗೆಟ್ಟರೂ ಪರವಾಗಿಲ್ಲ, ಈ ಬಾರಿ ಬೇಡಿಕೆ ಈಡೇರಿಸಿಕೊಳ್ಳದೆ ಖಾಲಿ ಕೈಯಲ್ಲಿ ಮನೆಗೆ ಮರಳುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ, ಗಾಳಿ ಯಾವುದಕ್ಕೂ ಜಗ್ಗದೆ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.

Must Read