November 25, 2026
Wednesday, November 25, 2026
spot_img

ಕೆಫೆಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾ*ಚಾರ : ಇಬ್ಬರು ಮಹಿಳೆಯರು ಸೇರಿ ಮೂವರು ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಪೂರ್ವ ದೆಹಲಿಯ ಪ್ರೀತ್‌ ವಿಹಾರ್‌ನಲ್ಲಿರುವ ಕೆಫೆಯೊಂದರಲ್ಲಿ 22 ವರ್ಷದ ಯುವತಿ ಮೇಲೆ ಆಕೆಯ ಸಹೋದ್ಯೋಗಿಗಳೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ, ಆಕೆ ಹಾಗೂ ಆರೋಪಿಗಳು ಒಂದೇ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದರು. ನವೆಂಬರ್‌ 23ರ ರಾತ್ರಿ ಸಹೋದ್ಯೋಗಿಗಳೊಂದಿಗೆ ಪ್ರೀತ್‌ ವಿಹಾರ್‌ನಲ್ಲಿರುವ ‘ಸಲ್ತಾನತೆ ಕೆಫೆ’ಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಗುಂಪಿನಲ್ಲಿ ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರಿದ್ದರು ಎನ್ನಲಾಗಿದೆ.

ರಾತ್ರಿ 11.30ರ ಸುಮಾರಿಗೆ ಕೆಫೆ ಮುಚ್ಚಲಾಗಿತ್ತು. ಆದರೆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರ ಬಳಿ ಕೆಫೆಯ ಕೀಲಿ ಕೈ ಇದ್ದ ಕಾರಣ, ಬಳಿಕ ಎಲ್ಲರೂ ಮತ್ತೊಂದು ಕೆಫೆಗೆ ತೆರಳಿದ್ದರು. ಮುಂಜಾನೆ 3 ಗಂಟೆ ಸುಮಾರಿಗೆ ಪ್ರೀತ್‌ ವಿಹಾರ್‌ನಲ್ಲಿರುವ ಮತ್ತೊಂದು ಕೆಫೆಗೆ ತಲುಪಿದ್ದು, ಆರೋಪಿಗಳಲ್ಲಿ ಒಬ್ಬರು ಅಲ್ಲಿ ಕೆಲಸ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂತ್ರಸ್ತೆಯ ಆರೋಪದ ಪ್ರಕಾರ, ಮುಂಜಾನೆ 3.30ರ ಸುಮಾರಿಗೆ ಇಬ್ಬರು ಪುರುಷರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಗುಂಪಿನಲ್ಲಿದ್ದ ಇತರರು ಕೃತ್ಯಕ್ಕೆ ಸಹಕರಿಸಿದ್ದಾರೆ ಎನ್ನಲಾಗಿದೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಎಲ್ಲರೂ ಮದ್ಯಪಾನ ಮಾಡಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಟಿ ನಡೆಯುತ್ತಿದ್ದ ವೇಳೆ ಮನೆಗೆ ಮರಳಲು ತಡವಾಗುತ್ತದೆ ಎಂದು ಸಂತ್ರಸ್ತೆ ತನ್ನ ತಾಯಿಗೆ ಕರೆ ಮಾಡಿ ತಿಳಿಸಿದ್ದರು. ಘಟನೆ ಬಳಿಕ ಗುಂಪಿನಲ್ಲಿದ್ದವರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು. ಮುಂಜಾನೆ 5.30ರ ಸುಮಾರಿಗೆ ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Must Read