November 25, 2026
Wednesday, November 25, 2026
spot_img

ನ.26ಕ್ಕೆ ಕಾಗಿನೆಲೆಯ ಕನಕದಾಸ ಜಯಂತಿಯಲ್ಲಿ ಸಿಎಂ ಡಿಕೆಶಿ ಭಾಗಿ

ಹೊಸದಿಗಂತ ವರದಿ ಹಾವೇರಿ:

ದಾಸ ಶ್ರೇಷ್ಠ ಕನಕದಾಸರ 539ನೇ ಜಯಂತ್ಯುತ್ಸವದ ಅಂಗವಾಗಿ ನ.26 ಮತ್ತು 27ರಂದು ಕಾಗಿನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಉಪಮುಖುಮಂತ್ರಿ ಡಾ.ಪರಮೇಶ್ವರ ಭಾಗವಹಿಸಲಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ನಗರದ ಐಬಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಹಾವೇರಿ ತಾಲೂಕಿಗೆ ಕನಕದಾಸರ ಜಯಂತಿಯ ಜವಾಬ್ದಾರಿ ದೊರೆತಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಹಿರೇಕೆರೂರು, ರಾಣೆಬೆನ್ನೂರು ಸೇರಿದಂತೆ ವಿವಿಧ ತಾಲೂಕುಗಳ ಸಮಾಜದ ಮುಖಂಡರು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಬಾರಿ ಹಾವೇರಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಪ್ರಚಾರ ಕೈಗೊಂಡು ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು.

ನ.26ರಂದು ಸುಮಾರು ಆರು ಲಕ್ಷ ರೊಟ್ಟಿ ಜಾತ್ರೆ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳ ಜನರು ಉತ್ಸಾಹದಿಂದ ಪಾಲ್ಗೊಳ್ಳುವ ನಿರೀಕ್ಷೆಯಿದೆ. ನ.26 ಮತ್ತು 27ರಂದು ನಡೆಯುವ ಜಯಂತ್ಯುತ್ಸವಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬರುವುದಾಗಿ ತಿಳಿಸಿದ್ದರು, ನಂತರ ಕಾರಣಾಂತರಗಳಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ನ.26ರಂದು ಬೆಳಗ್ಗೆ 10 ಗಂಟೆಗೆ ಕೊಪ್ಪಳದಿಂದ ಹೊರಟು 11 ಗಂಟೆಗೆ ಕೆಎಲ್‌ಇ ಮೈದಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗಮಿಸಲಿದ್ದಾರೆ. ಅಲ್ಲಿಂದ ಹಾವೇರಿ ನಗರದ ಕಾಗಿನೆಲೆ ಕ್ರಾಸ್‌ನಲ್ಲಿ ನಿರ್ಮಿಸಿರುವ ಕನಕದಾಸರ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ. ಸುಮಾರು ₹10 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಎಂಟೂವರೆ ಅಡಿ ಎತ್ತರದ ಮೂರ್ತಿ ನಿರ್ಮಿಸಲಾಗಿದೆ. ಬಳಿಕ ಕಾಗಿನೆಲೆಯಲ್ಲಿ ಕನಕದಾಸರ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿರಂಜನಾನಂದಪುರಿ ಸ್ವಾಮೀಜಿ ರೇವಣಸಿದ್ದೇಶ್ವರ ಜೋಳಿಗೆ ಹಿಡಿದು ದುಶ್ಚಟಗಳ ಭಿಕ್ಷೆ ಪಡೆದು ಸದ್ಗುಣಗಳ ದೀಕ್ಷೆ ನೀಡುವ ಅಭಿಯಾನ ನಡೆಸುತ್ತಿದ್ದಾರೆ. ಇದರ ಸಮಾರೋಪ ಸಮಾರಂಭವೂ ಇದೇ ವೇಳೆ ನಡೆಯಲಿದೆ ಎಂದರು.

ಕಾಗಿನೆಲೆ ಹಾಗೂ ಬಾಡದ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, 2026-27ನೇ ಸಾಲಿನ ಬಜೆಟ್‌ನಲ್ಲಿ ₹34 ಕೋಟಿ ಅನುದಾನ ಒದಗಿಸಲಾಗಿದೆ. ಈ ಅನುದಾನದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ದೊರೆಯಲಿದೆ. ಸಮಾಜದ ಎಲ್ಲ ಮುಖಂಡರು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಯಂತ್ಯುತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹೂಡಾ ಮಾಜಿ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ ಅನ್ವೇರಿ, ಉಪಾಧ್ಯಕ್ಷ ಅಶೋಕ ಬಣಕಾರ, ಮುಖಂಡ ಗಿರೀಶ ಇಂಡಿಮಠ ಸೇರಿದಂತೆ ಹಲವರಿದ್ದರು.

Must Read