November 25, 2026
Wednesday, November 25, 2026
spot_img

ನವೀಕರಣಗೊಂಡು ವಿದ್ಯುತ್ ಉತ್ಪಾದನೆಗೆ ಸಜ್ಜಾದ ಕೈಗಾದ ಮೊದಲ ಅಣು ವಿದ್ಯುತ್ ಘಟಕ

ಹೊಸದಿಗಂತ ವರದಿ ಕಾರವಾರ :

ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತದ (ಎನ್‌ಪಿಸಿಐಎಲ್) ಆರನೇ ಪರಮಾಣು ಕೇಂದ್ರವಾದ ಕೈಗಾದ ಮೊದಲನೆ ಅಣುವಿದ್ಯುತ್ ಘಟಕವು ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯಿಂದ (ಎಇಆರ್‌ಬಿ) ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದು ಎನ್-ಮಾಸ್ ಕೂಲಂಟ್ ಚಾನೆಲ್ ಬದಲಾವಣೆ (ಇಎಂಸಿಸಿಆರ್) ಮತ್ತು ಎನ್-ಮಾಸ್ ಫೀಡರ್ ಬದಲಾವಣೆ (ಇಎಂಎಫ್‌ಆರ್) ಚಟುವಟಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ನ.22 ರಂದು ಬೆಳಿಗ್ಗೆ 10;45 ಗಂಟೆಗೆ ಸ್ವಯಂ-ಸುಸ್ಥಿರ ಸರಣಿ ಕ್ರಿಯೆಯನ್ನು (ಕ್ರಿಟಿಕಾಲಿಟಿ) ಸಾಧಿಸಿದೆ ಎಂದು ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತ ಪ್ರಕಟನೆ ನೀಡಿದೆ.

ಸ್ಥಾಪಿತ ಕಾರ್ಯವಿಧಾನದಂತೆ ಕಡ್ಡಾಯ ಪರೀಕ್ಷೆಗಳು ಪೂರ್ಣಗೊಂಡ ನಂತರ, ಈ ಘಟಕವನ್ನು ದಕ್ಷಿಣ ಗ್ರಿಡ್‌ಗೆ ಸಿಂಕ್ರೊನೈಸ್( ಜೋಡನೆ) ಮಾಡಲಾಗುವುದು. ನಂತರ, ಘಟಕದ ವಿದ್ಯುತ್ ಮಟ್ಟವನ್ನು ಕ್ರಮೇಣವಾಗಿ ಅದರ ನಿಗದಿತ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು ಮತ್ತು ಶುದ್ಧ, ವಿಶ್ವಾಸಾರ್ಹ ಮತ್ತು ಹಸಿರು ವಿದ್ಯುತ್ ಉತ್ಪಾದನೆಯನ್ನು ಮುಂದುವರಿಸಲಾಗುವುದು ಎಂದು ನಿಗಮ ತಿಳಿಸಿದೆ.

ಇಎಂಸಿಸಿಆರ್ ಮತ್ತು ಇಎಂಎಫ್‌ಆರ್ ಅವಧಿಯು 600 ದಿನಗಳ ಕಾಲ ನಡೆಯಿತು. ಇದು ಭಾರತೀಯ ಪರಮಾಣು ವಿದ್ಯುತ್ ಕಾರ್ಯಕ್ರಮದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅವಧಿಯಾಗಿದ್ದು, ರಿಯಾಕ್ಟರ್ ನವೀಕರಣ ಮತ್ತು ಜೀವಿತಾವಧಿ ವಿಸ್ತರಣೆ ಚಟುವಟಿಕೆಗಳಿಗೆ ಹೊಸ ರಾಷ್ಟ್ರೀಯ ಮಾನದಂಡವನ್ನು ಸ್ಥಾಪಿಸಿದೆ. ಕೆಜಿಎಸ್‌ನ ಘಟಕ-1 ಹಿಂದೆ ನಿರಂತರವಾಗಿ 962 ದಿನಗಳ ಕಾಲ ಕಾರ್ಯಾಚರಣೆ ನಡೆಸಿ, ಆಗ ಎಲ್ಲಾ ತಂತ್ರಜ್ಞಾನಗಳ ಪರಮಾಣು ವಿದ್ಯುತ್ ರಿಯಾಕ್ಟರ್‌ಗಳಲ್ಲಿ ನಿರಂತರ ಕಾರ್ಯಾಚರಣೆಯ ವಿಶ್ವ ದಾಖಲೆಯನ್ನು ಸೃಷ್ಟಿಸಿತ್ತು ಎನ್ನುವುದು ಉಲ್ಲೇಖನೀಯ ಎಂದು ನಿಗಮ ತಿಳಿಸಿದೆ.

Must Read