ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ದೀಪತೂಣ್ನಲ್ಲಿ ಕಾರ್ತಿಕ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರೂ, ನವೆಂಬರ್ 24ರಂದು ಅಲ್ಲಿ ದೀಪ ಬೆಳಗದಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಅಧಿಕಾರಿಗಳು ಸುಪ್ರೀಂ ಕೋರ್ಟ್ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಕಾರ್ತಿಕ ದೀಪೋತ್ಸವದ ಅಂಗವಾಗಿ ನವೆಂಬರ್ 24, 2026ರಂದು ಒಂದು ಬಾರಿಯ ಕ್ರಮವಾಗಿ ಬೆಟ್ಟದ ಮೇಲಿರುವ ದೀಪತೂಣ್ ಬಳಿ ಸಾಂಪ್ರದಾಯಿಕ ದೀಪ ಬೆಳಗಿಸಲು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಅನುಮತಿ ನೀಡಿತ್ತು. ದೇವಸ್ಥಾನದ ಆಡಳಿತ ಮಂಡಳಿಯಿಂದ ಅಧಿಕೃತಗೊಂಡ ಸಣ್ಣ ತಂಡವಷ್ಟೇ ಈ ಕಾರ್ಯವನ್ನು ನಡೆಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು.
ಆದರೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ನಿಗದಿತ ದಿನದಂದು ದೀಪತೂಣ್ನಲ್ಲಿ ದೀಪ ಬೆಳಗಿಸಲಾಗಿಲ್ಲ. ಬದಲಿಗೆ, ಸಂಪ್ರದಾಯದಂತೆ ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಸಮೀಪವಿರುವ ದೀಪ ಮಂಟಪದಲ್ಲಿ ಮಹಾದೀಪವನ್ನು ಬೆಳಗಿಸಲಾಯಿತು. ದೀಪತೂಣ್ನಲ್ಲಿ ದೀಪ ಬೆಳಗಿಸುವುದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಆಗಮ ಮತ್ತು ದೇವಸ್ಥಾನದ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದ ದೇವಸ್ಥಾನದ ಟ್ರಸ್ಟಿಗಳ ಮಂಡಳಿ, ನ್ಯಾಯಾಲಯದ ಆದೇಶ ಪಾಲಿಸಲು ತಂಡಕ್ಕೆ ಅನುಮತಿ ನೀಡಲು ನಿರಾಕರಿಸಿದೆ ಎನ್ನಲಾಗಿದೆ.
ಈ ಸಂಬಂಧ ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ ಅವರು ಸುಪ್ರೀಂ ಕೋರ್ಟ್ಗೆ ಸ್ಥಿತಿಗತಿ ವರದಿ ಸಲ್ಲಿಸಿ ಕ್ಷಮೆಯಾಚಿಸಿದ್ದಾರೆ. ಜಿಲ್ಲಾಡಳಿತವು ದೀಪ ಬೆಳಗಿಸಲು ಅಗತ್ಯವಿರುವ ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿತ್ತು. ಆದರೆ, ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರದಿಂದಾಗಿ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಇದರಲ್ಲಿ ಉದ್ದೇಶಪೂರ್ವಕ ನ್ಯಾಯಾಂಗ ನಿಂದನೆಯ ಉದ್ದೇಶವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು, ನ್ಯಾಯಾಲಯದ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ, ಅರ್ಜಿದಾರರು ಪ್ರತ್ಯೇಕವಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಅಂತಹ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿದೆ.
ಏನಿದು ದೀಪತೂಣ್ ವಿವಾದ?
ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬವು ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ದರ್ಗಾದ ಸಮೀಪದಲ್ಲಿದೆ. ಈ ಕಂಬದ ಮೇಲೆ ಕಾರ್ತಿಕ ದೀಪ ಬೆಳಗಿಸಬೇಕು ಎಂದು ಹಿಂದೂ ಸಂಘಟನೆಗಳು ಹಲವು ವರ್ಷಗಳಿಂದ ಒತ್ತಾಯಿಸುತ್ತಿವೆ. ಆದರೆ, ಇದು ಬ್ರಿಟಿಷರ ಕಾಲದ ಸರ್ವೇ ಕಲ್ಲಾಗಿದ್ದು, ಇಲ್ಲಿ ದೀಪ ಬೆಳಗಿಸುವ ಯಾವುದೇ ಸಾಂಪ್ರದಾಯಿಕ ಆಚರಣೆ ಇಲ್ಲ ಎಂಬುದು ದೇವಸ್ಥಾನದ ಆಡಳಿತ ಮಂಡಳಿಯ ವಾದವಾಗಿದೆ.
ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬಳಿಕವೂ ದೀಪತೂಣ್ನಲ್ಲಿ ದೀಪ ಬೆಳಗದಿರುವುದು ವಿವಾದಕ್ಕೆ ಮತ್ತಷ್ಟು ಕಿಡಿ ಹಚ್ಚಿದೆ. ಈ ಬೆಳವಣಿಗೆಯನ್ನು ಖಂಡಿಸಿ ತಮಿಳುನಾಡಿನ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದು, ಪ್ರಕರಣ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.



