November 24, 2026
Tuesday, November 24, 2026
spot_img

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿಗೆ ಸಂಚು: 10 ತಿಂಗಳ ಬಳಿಕ ಓರ್ವನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಚೋದನಕಾರಿ ವಿಚಾರಗಳು ಯುವ ಮನಸ್ಸುಗಳನ್ನು ಹೇಗೆ ಅಪಾಯಕಾರಿ ದಿಕ್ಕಿನತ್ತ ಕೊಂಡೊಯ್ಯಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಬೆಳಕಿಗೆ ಬಂದಿರುವ ಪ್ರಕರಣ ಸಾಕ್ಷಿಯಾಗಿದೆ.

ಪಾಕಿಸ್ತಾನ ಬೆಂಬಲಿತ ಆನ್‌ಲೈನ್ ಜಾಲದ ಮೂಲಕ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ ಆರೋಪದ ಮೇಲೆ 22 ವರ್ಷದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪವೂ ಈತನ ಮೇಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ತಿಂಗಳಿಂದ ಪೊಲೀಸರ ಕಣ್ಣುತಪ್ಪಿಸಿ ಓಡಾಟ

ಬಂಧಿತನನ್ನು ಮೀರತ್‌ನ ಬನಿಯಾಪಾಡ ನಿವಾಸಿ ಉಜೈದ್ ಎಂದು ಗುರುತಿಸಲಾಗಿದೆ. ಕೊತ್ವಾಲಿ ಪೊಲೀಸರು ಮತ್ತು SWAT ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಗಹ್ಲೋಟ್ ರಸ್ತೆಯಲ್ಲಿ ಆತನನ್ನು ವಶಕ್ಕೆ ಪಡೆದಿದೆ. ಕಳೆದ 10 ತಿಂಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಈತ, ಕೆಲವೊಮ್ಮೆ ಸಂಬಂಧಿಕರ ಮನೆಯಲ್ಲಿ, ಮತ್ತೆ ಕೆಲವೊಮ್ಮೆ ಬೇರೆ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಇದನ್ನೂ ಓದಿ:

ಸೋಷಿಯಲ್ ಮೀಡಿಯಾದಲ್ಲೇ ಉಗ್ರರ ಸಂಪರ್ಕ

ಪೊಲೀಸರ ಪ್ರಕಾರ, ಉಜೈದ್ ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಭಾರತ ವಿರೋಧಿ ವಿಚಾರಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ವೀಕ್ಷಿಸುತ್ತಿದ್ದ. ಪಾಕಿಸ್ತಾನ ಮೂಲದ ಜೈಶ್‌-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ವಿಚಾರಗಳಿಂದ ಪ್ರಭಾವಿತನಾಗಿದ್ದ ಎನ್ನಲಾಗಿದೆ. ಜಮ್ಮುವಿನ ಮೊಹಮ್ಮದ್ ಸಾಜಿದ್ ಎಂಬಾತನೊಂದಿಗೆ ಸಂಪರ್ಕ ಬೆಳೆಸಿಕೊಂಡು ಆನ್‌ಲೈನ್ ಮೂಲಕ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಸೆಳೆಯುವ ಪ್ರಯತ್ನ ನಡೆಸಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

ಸೇನಾ ಶಿಬಿರದ ಮೇಲೆ ದಾಳಿಗೆ ಸಂಚು

ನವೆಂಬರ್ 2025ರಲ್ಲಿ ಪ್ರಮುಖ ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ ನಡೆಸಲು ಇಬ್ಬರೂ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಈ ಸಂಚಿನಲ್ಲಿ ಸಾಜಿದ್ ಸೇನಾ ಶಿಬಿರದ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ಹೊಂದಿದ್ದರೆ, ಉಜೈದ್ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ತುಂಬಿದ ಉಡುಪುಗಳನ್ನು ವ್ಯವಸ್ಥೆ ಮಾಡುವ ಹೊಣೆ ಹೊತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸಾಜಿದ್ ಬಂಧನದ ಬಳಿಕ ಈ ಯೋಜನೆ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಮೂರು ಆನ್‌ಲೈನ್ ಗುಂಪುಗಳ ಮೂಲಕ ಜಾಲ

‘ಟ್ಯೂಷನ್-40’, ‘ಬ್ರಿಗೇಡ್’ ಮತ್ತು ‘ಅಲ್-ಮುಜಾಹಿದ್’ ಹೆಸರಿನ ಗುಂಪುಗಳ ಮೂಲಕ ಯುವಕರನ್ನು ಪ್ರಚೋದಿಸಲಾಗುತ್ತಿತ್ತು ಎಂಬುದು ಪೊಲೀಸರ ಆರೋಪ. ಇನ್‌ಸ್ಟಾಗ್ರಾಂ, ಸಿಗ್ನಲ್ ಮತ್ತು ಸೆಷನ್ ಆ್ಯಪ್‌ಗಳನ್ನು ಸಂಪರ್ಕಕ್ಕಾಗಿ ಬಳಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಪೊಲೀಸರಿಗೆ ಉಜೈದ್ ಬಂಧನದ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಅಧಿಕಾರಿಗಳು ಮೀರತ್‌ಗೆ ಆಗಮಿಸುತ್ತಿದ್ದಾರೆ. ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

Must Read

Skip to toolbar