November 24, 2026
Tuesday, November 24, 2026
spot_img

ರಿಯಾದ್‌ನ ವಾಣಿಜ್ಯ ಕಟ್ಟಡದ ಮೇಲೆ ಹೌತಿ ಬಂಡುಕೋರರ ದಾಳಿ: ಇಬ್ಬರು ಭಾರತೀಯರು ಸೇರಿ 11 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಪ್ರತಿಷ್ಠಿತ ‘ಫೈನಾನ್ಷಿಯಲ್ ಸೆಂಟರ್’ನ ಟವರ್ ಒಂದರ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ನಡೆಸಿದ್ದಾರೆ ಎನ್ನಲಾದ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ನಾಗರಿಕ ರಕ್ಷಣಾ ಇಲಾಖೆ ಮಂಗಳವಾರ ತಿಳಿಸಿದೆ.

ಗಾಯಾಳುಗಳ ವಿವರ

ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು, “ರಿಯಾದ್ ನಗರದ ಫೈನಾನ್ಷಿಯಲ್ ಸೆಂಟರ್‌ನ ಒಂದು ಟವರ್ ಮೇಲೆ ಹೌತಿ ಉಗ್ರರು ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 11 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರು ಸೌದಿ ಪ್ರಜೆಗಳು, ಇಬ್ಬರು ಭಾರತೀಯರು, ಮೂವರು ನೇಪಾಳಿಗರು ಹಾಗೂ ನಾಲ್ವರು ಈಜಿಪ್ಟ್ ಪ್ರಜೆಗಳು ಸೇರಿದ್ದಾರೆ” ಎಂದು ಮಾಹಿತಿ ನೀಡಿದೆ.

ಘಟನೆ ನಡೆದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತುರ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಜೀವ ಮತ್ತು ಆಸ್ತಿಪಾಸ್ತಿ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರರೂ ಈ ಘಟನೆಯನ್ನು ‘ಹೇಡಿತನದ ಭಯೋತ್ಪಾದಕ ದಾಳಿ’ ಎಂದು ಖಂಡಿಸಿದ್ದು, ಸ್ಥಳದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತೀಕಾರದ ದಾಳಿಯೇ ಈ ಘಟನೆಗೆ ಕಾರಣ?

ಯೆಮೆನ್‌ನ ಅಲ್-ಹುದೈದಾ ಪ್ರಾಂತ್ಯದಲ್ಲಿ ಸೌದಿ ನೇತೃತ್ವದ ಮೈತ್ರಿಕೂಟದ ಯುದ್ಧವಿಮಾನಗಳು ವೈಮಾನಿಕ ದಾಳಿ ನಡೆಸಿವೆ ಎಂಬ ಆರೋಪಗಳ ಬೆನ್ನಲ್ಲೇ, ಸೌದಿ ಅರೇಬಿಯಾ ಮತ್ತು ಯೆಮೆನ್‌ನ ಹೌತಿ ಬಂಡುಕೋರರ ನಡುವೆ ಉದ್ವಿಗ್ನತೆ ತೀವ್ರಗೊಂಡಿದೆ. ಇದರ ನಡುವೆಯೇ ರಿಯಾದ್ ಮೇಲೆ ಈ ದಾಳಿ ನಡೆದಿದೆ.

ಇದನ್ನೂ ಓದಿ:

ಯೆಮೆನ್‌ನಲ್ಲಿ 17 ಕಾರ್ಮಿಕರ ಸಾವು ಆರೋಪ

ಸೋಮವಾರ ಮುಂಜಾನೆ ಅಲ್-ಹುದೈದಾ ಪ್ರಾಂತ್ಯದಲ್ಲಿರುವ ದೂರಸಂಪರ್ಕ ಕಟ್ಟಡಗಳು, ಕಾರ್ಮಿಕರ ವಸತಿ ನಿಲಯ ಹಾಗೂ ಮಸೀದಿಯೊಂದನ್ನು ಗುರಿಯಾಗಿಸಿ ಸೌದಿ ಮೈತ್ರಿಕೂಟದ ವಿಮಾನಗಳು ವೈಮಾನಿಕ ದಾಳಿ ನಡೆಸಿವೆ ಎಂದು ಹೌತಿ ನಿಯಂತ್ರಿತ ಯೆಮೆನ್‌ನ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆರೋಪಿಸಿದೆ. ಈ ದಾಳಿಯಲ್ಲಿ 17 ಕಾರ್ಮಿಕರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ ಹಾಗೂ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಮತ್ತು ದೂರಸಂಪರ್ಕ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಹೇಳಿಕೊಂಡಿದೆ.

Must Read

Skip to toolbar