ಹೊಸದಿಗಂತ ಜಿಡಿಟಲ್ ಡೆಸ್ಕ್:
ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ತರಂಗಂಬಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಒಂದು ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದೆ. ಕಳೆದ ಎರಡು ವಾರಗಳಿಂದ ಬಿಸಿಲಿನ ತಾಪ ಹೆಚ್ಚಾಗಿ ಒಣಹವೆ ಇತ್ತು. ಇದೀಗ ಸುರಿದ ಅಕಾಲಿಕ ಮಳೆಯು ಜನಜೀವನವನ್ನು ಕೊಂಚ ಅಸ್ತವ್ಯಸ್ತಗೊಳಿಸಿದರೂ, ಸಾಂಬಾ ಭತ್ತದ ಬೆಳೆಗೆ ಇದು ಸಂಜೀವಿನಿಯಂತಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ತರಂಗಂಬಾಡಿ, ಕಂಜನಗರಂ, ಆತುಪತಿ, ತಿರುವಿಡಕಳಿ ಸೇರಿದಂತೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮೈಲಾಡುತುರೈ ಮತ್ತು ಇತರ ಡೆಲ್ಟಾ ಜಿಲ್ಲೆಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:
ಇತ್ತ ಕರ್ನಾಟಕದ ರೈತರ ಪರಿಸ್ಥಿತಿ ಗಂಭೀರ
ಒಂದೆಡೆ ತಮಿಳುನಾಡಿನಲ್ಲಿ ಮಳೆಯಿಂದಾಗಿ ರೈತರು ನಿಟ್ಟುಸಿರು ಬಿಟ್ಟಿದ್ದರೆ, ಇತ್ತ ಕರ್ನಾಟಕದ ರೈತರು ಮಳೆ ಕೊರತೆ ಹಾಗೂ ಬರಗಾಲದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮತ್ತು ಹಿಂಗಾರು ಮಳೆಗಳೆರಡೂ ಕೈಕೊಟ್ಟಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಆಕಾಶದತ್ತ ಮುಖ ಮಾಡಿದ್ದಾರೆ.
ಕಷ್ಟಪಟ್ಟು ಬೋರ್‌ವೆಲ್ ನೀರಿನ ಆಸರೆಯಿಂದ ಬೆಳೆದ ಅಲ್ಪಸ್ವಲ್ಪ ಭತ್ತಕ್ಕೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ರಾಯಚೂರು ಸೇರಿದಂತೆ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಕಳೆದ ವಾರ ಕ್ವಿಂಟಲ್‌ಗೆ 3,500 ರಿಂದ 4,000 ಇದ್ದ ಭತ್ತದ ಬೆಲೆ, ಈಗ ದಿಢೀರನೆ 2,800 ರಿಂದ 3,500ಕ್ಕೆ ಕುಸಿದಿದೆ.
ರೈತರ ಅಳಲು, ಸರ್ಕಾರಕ್ಕೆ ಮನವಿ
ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗಗನಕ್ಕೇರಿದ್ದರೂ, ರೈತರು ಬೆಳೆದ ಭತ್ತಕ್ಕೆ ಮಾತ್ರ ಕಡಿಮೆ ಬೆಲೆ ಸಿಗುತ್ತಿದೆ. ನೆರೆಯ ರಾಜ್ಯಗಳಿಂದ ಭತ್ತ ಆಮದಾಗುತ್ತಿರುವುದೇ ಸ್ಥಳೀಯ ಭತ್ತದ ಬೆಲೆ ಕುಸಿತಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ. ಬರಗಾಲ ಮತ್ತು ಬೆಲೆ ಕುಸಿತದ ಈ ಹೊಡೆತದಿಂದ ತಮ್ಮನ್ನು ಪಾರು ಮಾಡಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಭತ್ತಕ್ಕೆ ನ್ಯಾಯಯುತ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.



