ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಒಂಬತ್ತು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರಾಜ್ಯದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಇದೀಗ ಸ್ಯಾಂಡಲ್ವುಡ್ ಹಿರಿಯ ನಟಿ ತಾರಾ ಅನುರಾಧಾ ಅವರು ಕೈಜೋಡಿಸಿದ್ದಾರೆ.
ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾರಾ ಅವರು, ಕಾರ್ಯಕರ್ತೆಯರೊಂದಿಗೆ ಕೆಲಕಾಲ ಧರಣಿ ಕುಳಿತು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕರ್ತೆಯರ ಕಷ್ಟಗಳನ್ನು ಆಲಿಸಿದ ಅವರು, ನೆಚ್ಚಿನ ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಮಹಿಳೆಯರಿಗೆ ಬೇಸರ ಮಾಡಿಕೊಳ್ಳದೆ ನಗುನಗುತ್ತಲೇ ಫೋಟೋಗಳಿಗೆ ಪೋಸ್ ನೀಡಿದರು.
ತಾರಾ ಅನುರಾಧಾ ಹೇಳಿದ್ದೇನು?
ಮಾಧ್ಯಮಗಳೊಂದಿಗೆ ಮಾತನಾಡಿದ ತಾರಾ, “ಆಶಾ ಕಾರ್ಯಕರ್ತೆಯರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ನಿಜಕ್ಕೂ ಶೋಚನೀಯ. ವರ್ಷದಲ್ಲಿ ಕೇವಲ ಐದಾರು ತಿಂಗಳು ಮಾತ್ರ ಇವರಿಗೆ ವೇತನ ಸಿಗುತ್ತಿದೆ ಎಂಬುದು ಸರಿಯಲ್ಲ. ಕಳೆದ 9 ದಿನಗಳಿಂದ ಇಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದೆ ಹೆಣ್ಣುಮಕ್ಕಳು ಕಷ್ಟಪಡುತ್ತಿದ್ದಾರೆ. ಸರ್ಕಾರ ಇವರನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ತಂದು, ಇವರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಬೇಕು” ಎಂದು ಒತ್ತಾಯಿಸಿದರು.
ಪ್ರಮುಖ ಬೇಡಿಕೆಗಳೇನು?
ಈ ಹಿಂದೆ ನಟಿ ರಮ್ಯಾ ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಮಾಸಿಕ 15,000 ನಿಶ್ಚಿತ ಗೌರವಧನ, 5 ಲಕ್ಷ ನಿವೃತ್ತಿ ಪರಿಹಾರ, ಬಾಕಿ ಉಳಿದಿರುವ ಪ್ರೋತ್ಸಾಹಧನ ಪಾವತಿ, ವೈದ್ಯಕೀಯ ನೆರವು ಹಾಗೂ ಹೆರಿಗೆ ರಜೆ ಸೇರಿದಂತೆ ಹಲವು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರೆಸಿದ್ದಾರೆ.



