ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಮೊಕಮಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ಅವರು ತಮ್ಮ ಕಿರಿಯ ಪುತ್ರಿ ಶಿವಾಂಗಿ ಸಿಂಗ್ ಅವರ ಮದುವೆಯನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಿದ್ದು, ಇಡೀ ದೇಶವೇ ಬಿಹಾರದತ್ತ ತಿರುಗಿನೋಡುವಂತಾಗಿದೆ.
ಮೊಕೊಮೊ ಕ್ಷೇತ್ರದ ಅನಂತ್ ಸಿಂಗ್ ನಿನ್ನೆ ಅದ್ಧೂರಿಯಾಗಿ ಶಿವಾಂಗಿ ಅವರ ವಿವಾಹವನ್ನು ನೆರವೇರಿಸಿಕೊಟ್ಟಿದ್ದಾರೆ. ಈ ಮದುವೆಯಲ್ಲಿ ಭಾಗಿಯಾಗಲು ಲಕ್ಷಾಂತರ ಮಂದಿ ಆಗಮಿಸಿದ್ದು, ಬರೋಬ್ಬರಿ ಹತ್ತು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಿಹಾರದ ಜನತೆಗೆ ಮುಕ್ತ ಆಹ್ವಾನ ನೀಡಿದ ಕಾರಣ, ಜನ ಬಸ್ಸು, ಟ್ರಾಕ್ಟರ್, ರೈಲುಗಳಲ್ಲಿ ಪ್ರಯಾಣಿಸಿ ಮದುವೆಗೆ ಆಗಮಿಸಿದ್ದರು.
ವಿಭಿನ್ನ ಸ್ಪರ್ಧೆ, ಆಕರ್ಷಕ ಬಹುಮಾನ
ಮದುವೆಯಲ್ಲಿ ಕುದುರೆ ಓಟದ ಸ್ಪರ್ಧೆಯನ್ನು ಮಾಡಲಾಗಿತ್ತು. ಇದು ಮಾಮೂಲಿ ಸ್ಪರ್ಧೆ ಅಲ್ಲ, ದೇಶದ ವಿವಿಧ ಭಾಗಗಳಿಂದ ಐವತ್ತಕ್ಕೂ ಹೆಚ್ಚು ಕುದುರೆಗಳ ನಡುವೆ ರೇಸ್ ಮಾಡಲಾಗಿತ್ತು. ಗೆದ್ದವರಿಗೆ ಮಹೀಂದ್ರ ಥಾರ್, ಬೈಕ್ ಹಾಗೂ ಸ್ಕೂಟಿ ಬಹುಮಾನವನ್ನು ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಜನಸಂದಣಿ ಅತಿಯಾಗಿರುವ ಕಾರಣ ಅಂತಿಮ ಸುತ್ತನ್ನು ಇಂದು ಮಾಡಲಾಗುತ್ತಿದೆ.
ವರದ ಸ್ವಾಗತಕ್ಕೆ ಆನೆ ಏರಿದ ಶಾಸಕ!
ವರ ರಿಷಿಕೇಶ್ ಕುಮಾರ್ ಸಿಆರ್ಪಿಎಫ್ ಕಮಾಂಡೆಂಟ್ ರಣವಿಜಯ್ ಕುಮಾರ್ ಸಿಂಗ್ ಅವರ ಪುತ್ರ. ಎಂಬಿಎ ಪದವೀಧರರಾಗಿರುವ ರಿಷಿಕೇಶ್ ಸುಮಾರು 11 ವರ್ಷ ಅಮೆರಿಕದಲ್ಲಿ ವಾಸವಾಗಿದ್ದರು. ವರನ ಕಡೆಯಿಂದ 151 ವಾಹನಗಳ ಮೆರವಣಿಗೆ ಆಗಮಿಸುವ ವ್ಯವಸ್ಥೆ ಮಾಡಲಾಗಿತ್ತು. ಅತಿಥಿಗಳ ವಾಹನಗಳಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸುಮಾರು 10 ಕಿಲೋಮೀಟರ್ವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಐದು ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿತ್ತು. ಎರಡು ಆನೆಗಳನ್ನು ತರಿಸಲಾಗಿದ್ದು, ವರನ ಕುಟುಂಬವನ್ನು ಸ್ವಾಗತಿಸಲು ಅನಂತ್ ಸಿಂಗ್ ಆನೆಯ ಮೇಲೆ ತೆರಳಿದ್ದರು.
ಐದು ಲಕ್ಷ ಜನರಿಗೆ ಊಟ
ಮದುವೆಯಲ್ಲಿ ವೆಜ್ ಊಟ ತಯಾರು ಮಾಡಲಾಗಿತ್ತು. ಬರೋಬ್ಬರು ಐದು ಲಕ್ಷ ಜನರಿಗಾಗಿ ಅಡುಗೆಯನ್ನು ತಯಾರು ಮಾಡಲಾಗಿತ್ತು. ಹತ್ತಾರು ಬಗೆಯ ಸ್ಟಾರ್ಟರ್ಸ್, ಹತ್ತು ಬಗೆಯ ಸಿಹಿ ತಿಂಡಿಗಳನ್ನು ನೀಡಲಾಗಿತ್ತು. ಸುಮಾರು 300 ಅಡುಗೆ ಒಲೆಗಳು, 500 ಬಾಣಸಿಗರು ಹಾಗೂ 30 ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು. ಸುಮಾರು 30 ಲಕ್ಷ ರಸಗುಲ್ಲಾಗಳನ್ನು 50 ಲಕ್ಷ ಗುಲಾಮ್ ಜಾಮೂನುಗಳನ್ನು ಉಣಬಡಿಸಲಾಯಿತು. ವಧುವಿಗೆ ಗಣ್ಯರಿಂದ ಮೂರು ಕೋಟಿ ರೂಪಾಯಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಕೇಂದ್ರ ಸಚಿವ ಲಲನ್ ಸಿಂಗ್, ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಮದುವೆಯಲ್ಲಿ ಭಾಗವಹಿಸಿದ್ದರು. ಭೋಜ್ಪುರಿ ಗಾಯಕ ಪವನ್ ಸಿಂಗ್, ಅಕ್ಷರಾ ಸಿಂಗ್ ಹಾಗೂ ಮೈಥಿಲಿ ಠಾಕೂರ್ ಅವರ ಸಂಗೀತ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.



