November 25, 2026
Wednesday, November 25, 2026
spot_img

ಕೋಲ್ಕತ್ತಾದ ಎಜೆಸಿ ಬೋಸ್ ರಸ್ತೆಯ ಬಟ್ಟೆ ಗೋದಾಮಿನಲ್ಲಿ ಭಾರೀ ಅಗ್ನಿ ಅವಘಡ; 10 ಕುಟುಂಬಗಳ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋಲ್ಕತ್ತಾದ ಮಲ್ಲಿಕ್‌ಬಜಾರ್ ಪ್ರದೇಶದ ಎಜೆಸಿ ಬೋಸ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ ಬಟ್ಟೆ ಗೋದಾಮಿನಲ್ಲಿ ಬುಧವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಕಟ್ಟಡದಲ್ಲಿ ವಾಸವಿದ್ದ 10 ಕುಟುಂಬಗಳನ್ನು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

10 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

ಕಟ್ಟಡದ ನೆಲಮಹಡಿಯಲ್ಲಿರುವ ಬಟ್ಟೆ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ದಟ್ಟವಾದ ಹೊಗೆ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ 10 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ತೆರೆದ ನೀರಿನ ಮೂಲದಿಂದ ಪಂಪ್ ಮೂಲಕ ನೀರನ್ನು ಪಡೆದು ಬೆಂಕಿಯನ್ನು ಹತೋಟಿಗೆ ತರಲಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿ ಶ್ಯಾಮ್ ಚಂದ್ರ ಮೊಂಡಲ್ ತಿಳಿಸಿದ್ದಾರೆ.

ಸಚಿವರು, ಶಾಸಕರ ಭೇಟಿ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ರಾಜ್ಯ ಸಚಿವ ಕೌಶಿಕ್ ಚೌಧರಿ, “ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಒಳಭಾಗದಲ್ಲಿ ದಟ್ಟ ಹೊಗೆ ಆವರಿಸಿದ್ದು, ನಮ್ಮ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳ ನೆರವಿನಿಂದ ಇಲ್ಲಿ ವಾಸವಿದ್ದ ಎಲ್ಲಾ 10 ಕುಟುಂಬಗಳನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಎಲ್ಲರೂ ಕ್ಷೇಮವಾಗಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಟಿಎಂಸಿ ಶಾಸಕ ಸೋವನ್‌ದೇವ್ ಚಟ್ಟೋಪಾಧ್ಯಾಯ ಅವರು ಮಾತನಾಡಿ, “ಕೆಳಭಾಗದ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಪ್ರದೇಶಕ್ಕೆ ವ್ಯಾಪಿಸಿದೆ. ಇದರಿಂದ ಭಾರಿ ಆಸ್ತಿಪಾಸ್ತಿ ನಷ್ಟವಾಗಿರುವ ಸಾಧ್ಯತೆಯಿದೆ. ಇದೊಂದು ಆಕಸ್ಮಿಕ ದುರಂತವಾಗಿರುವುದರಿಂದ ಸಂತ್ರಸ್ತರಿಗೆ ಸರ್ಕಾರದಿಂದ ಅಗತ್ಯ ನೆರವು ಕೊಡಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

Must Read

Skip to toolbar