ಹೊಸದಿಗಂತ ವರದಿ ದಾವಣಗೆರೆ:
ರಾಜ್ಯದಲ್ಲಿ 2028ರ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ ಅಧಿಕಾರಕ್ಕೆ ಬರಲಿದ್ದು, ಅದಕ್ಕೂ ಮುನ್ನ ರಾಜ್ಯ ಬಿಜೆಪಿಯಲ್ಲಿರುವ ಗೊಂದಲಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಡಾ.ಜಿ.ಎಂ.ಸಿದ್ದೇಶ್ವರ ಅಭಿಪ್ರಾಯಪಟ್ಟರು.
ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಗೊಂದಲ ಮುಂದುವರೆದಿದೆ. ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲೇ ನಾನೂ ಪಕ್ಷದ ಕಚೇರಿಗೆ ಕಾಲಿಟ್ಟಿಲ್ಲ. ನಮ್ಮ ಜಿಲ್ಲೆಯಲ್ಲಿ ಮೂವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನು ನಾವೇ ಮಾಡಿಸಿದ್ದೆವು. ಆ ಎಲ್ಲರನ್ನೂ ಹೇಳದೇ, ಕೇಳದೇ ಹುದ್ದೆಯಿಂದ ಕೆಳಗಿಳಿಸಿದರು. ನಾನು, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ್ದೆವು. ಆಗ 60 ದಿನದಲ್ಲಿ ಎಲ್ಲಾ ಸರಿ ಮಾಡುತ್ತೇವೆಂದಿದ್ದರು. ಆದರೆ ಏನೂ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದಲ್ಲಿ ನಮ್ಮ ಅನುಯಾಯಿಗಳೂ ಇರುತ್ತಾರೆ. ಅಂತಹವರನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಕಷ್ಟವಾಗುತ್ತದೆ. ಯಡಿಯೂರಪ್ಪನವರು ಹಿಂದೆ ನಾವು ದಾವಣಗೆರೆ ಜಿಲ್ಲೆಗೆ ಏನೇ ಕೇಳಿದರೂ ಮಾಡಿಕೊಟ್ಟಿದ್ದರು. ಯಡಿಯೂರಪ್ಪನವರ ಬಗ್ಗೆ ನಮ್ಮ ಯಾವುದೇ ಆಕ್ಷೇಪವೂ ಇಲ್ಲ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇನ್ನೂ ಯುವಕ. ಎಲ್ಲವನ್ನೂ ಸರಿ ಮಾಡಿಕೊಂಡು ಹೋಗಬೇಕು. ಆಗ ನಾವೂ ಗೌರವ ಕೊಡುತ್ತೇವೆ. ಯಾರದ್ದೋ ಮಾತು ಕೇಳಿಕೊಂಡು ಮಾಡಿದರೆ ತಪ್ಪಾಗುತ್ತದೆ. ವಿಧಾನಸಭೆ ಉಪಚುನಾವಣೆ, ಎಂ.ಎಲ್.ಸಿ ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದ್ದೇವೆ. ನಾವ್ಯಾರೂ ಹಿಂದೆ ಸರಿದಿಲ್ಲ. ಹಿಂದೆ ಸರಿದವರಿಗೆ ಪಾಪ, ಪುಣ್ಯ ಗೊತ್ತಾಗುತ್ತದೆ ಎಂದು ಅವರು ಸೂಚ್ಯವಾಗಿ ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಲ್ಲಾ ಹಣ ಹಾಕಿದ್ದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳೂ ಇಲ್ಲದಂತಾಗಿದೆ. ಎಲ್ಲಿ, ಯಾವ ಅಭಿವೃದ್ಧಿ ಕಾರ್ಯಗಳು, ಭೂಮಿಪೂಜೆ ಎಲ್ಲಿ ಆಗುತ್ತಿದೆ? ಮೈನ್ಸ್ ದು ಡಿಎಂಎ ಫಂಡ್ ನಿಂದ ಚಿತ್ರದುರ್ಗ, ಹೊಳಲ್ಕೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಒಂದಿಷ್ಟು ಕೆಲಸವಾಗುತ್ತಿದೆ. ಮೈನ್ಸ್ ನವರು ಕಟ್ಟಿದ ಹಣದಲ್ಲಿ ಅಭಿವೃದ್ಧಿ ಕೆಲಸವಾಗುತ್ತಿದೆಯಷ್ಟೇ ಎಂದು ಅವರು ಇದೇ ವೇಳೆ ಟೀಕಿಸಿದರು.



