ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದಿಂದ ಚಿಕ್ಕಮಗಳೂರಿಗೆ ಕಾಡಾನೆಗಳನ್ನು ಸ್ಥಳಾಂತರಗೊಳಿಸುವ ʼಆಪರೇಷನ್ ಗಜʼ ವಿರೋಧಿಸಿ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಕಾಫಿನಾಡಿನಲ್ಲಿ ಆನೆಗಳು ಕಾಣಿಸಿಕೊಂಡಿವೆ.
ಎನ್.ಆರ್.ಪುರ ತಾಲೂಕಿನ ರಾವೂರು ಗ್ರಾಮದ ಬಳಿ ಗಜಪಡೆ ಕಾಣಿಸಿಕೊಂಡಿದೆ. ಭದ್ರಾ ಅಭಯಾರಣ್ಯ ಸಮೀಪದ ವಸತಿ ಪ್ರದೇಶಕ್ಕೆ ಹತ್ತಿರವಾದ ಸ್ಥಳದಲ್ಲಿಯೇ ಆನೆಗಳ ಗ್ಯಾಂಗ್ ಕಾಣಿಸಿದ್ದು, ನಮ್ಮ ನೆಮ್ಮದಿಗಾಗಿ ಈ ಆನೆಗಳನ್ನು ಸ್ಥಳಾಂತರ ಮಾಡಿ ಎಂದು ಜನರು ಪಟ್ಟು ಹಿಡಿದು ಕುಳಿತಿದ್ದಾರೆ.
ಇಷ್ಟೇ ಅಲ್ಲದೆ ಬೀಟಮ್ಮ, ಭುವನೇಶ್ವರಿ, ಓಲ್ಡ್ ಬೆಲ್ಟ್ ಕಾಡಾನೆಗಳ ಗ್ಯಾಂಗ್ ಕೂಡ ಕಾಣಿಸಿಕೊಂಡಿದ್ದು, ನಾಲ್ಕು ಗುಂಪುಗಳಾಗಿ ಚದುರಿ ಬೇರೆ ಬೇರೆ ಹಳ್ಳಿಗಳಲ್ಲಿ ಕಾಣಿಸಿಕೊಂಡಿವೆ. ಮಾಕೋನಹಳ್ಳಿ ಬಳಿ ಒಂದನೇ ಗುಂಪು ಬೀಡುಬಿಟ್ಟಿದ್ದರೆ, ಎರಡನೇ ಹಿಂಡು ಕಾರ್ ಬೈಲು ಗ್ರಾಮದ ಬಳಿ ಓಡಾಟ ನಡೆಸಿವೆ. ಕಸ್ಕೆಬೈಲು ಗ್ರಾಮದ ಬಳಿ 3ನೇ ಕಾಡಾನೆ ಹಿಂಡು ಇದ್ದರೆ, 4ನೇ ಕಾಡಾನೆ ಹಿಂಡು ಕಲ್ಲುಗುಡ್ಡ ಗ್ರಾಮದ ಬಳಿ ಬೀಡುಬಿಟ್ಟಿವೆ. ಈ ನಾಲ್ಕೂ ಹಿಂಡುಗಳಲ್ಲಿ ಒಟ್ಟು 39 ಕಾಡಾನೆಗಳಿವೆ ಎನ್ನಲಾಗಿದೆ.
ಕಾಫಿ ತೋಟಗಳಿಗೆ ತೆರಳಿ ಬರುವ ಹಣದಿಂದ ಜೀವನ ಮಾಡುವ ಜನರು, ತೋಟಕ್ಕೆ ಹೋಗಲು ಹೆದರುತ್ತಿದ್ದಾರೆ. ಹೋದರೂ ವಾಪಾಸ್ ಬರುತ್ತೇವೋ ಇಲ್ಲವೋ ಎನ್ನುವ ಭಯದಿಂದ ಒದ್ದಾಡುತ್ತಿದ್ದಾರೆ. ಸದ್ಯ ಕಾಫಿತೋಟಗಳತ್ತ ಹೋಗಬೇಡಿ ಎಂದು ಅರಣ್ಯ ಇಲಾಖೆ ಸೂಚನೆ ನೀಡಿದೆ.



