ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್ ಗಿಟ್ಟಿಸಿಕೊಳ್ಳಲು ಸತ್ಯಾಸತ್ಯತೆ ಪರಿಶೀಲಿಸದೆ ಏನೇನೋ ಬರೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ, ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುವಿಜ್ಞಾ ಶರ್ಮಾ ವಿರುದ್ಧ ಬಾಲಿವುಡ್ ನಟ ಶಾರುಖ್ ಖಾನ್ ಕಾನೂನು ಸಮರ ಸಾರಿದ್ದಾರೆ. ಆಧ್ಯಾತ್ಮಿಕ ಗುರು ಸದ್ಗುರು ಅವರ ಕಾರ್ಯಕ್ರಮದಲ್ಲಿ ನಡೆದ ಘಟನೆಯ ವಿಡಿಯೋವನ್ನು ತಪ್ಪಾಗಿ ಬಿಂಬಿಸಿ, ನಟನ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಶಾರುಖ್ ಪರ ವಕೀಲರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.
ಏನಿದು ಘಟನೆ
ಸದ್ಗುರು ಅವರ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದ ವೇಳೆ, ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಜೊತೆ ಆತ್ಮೀಯವಾಗಿ ಮಾತನಾಡುತ್ತಿದ್ದರು. ಆದರೆ, ಈ ವಿಡಿಯೋ ತುಣುಕನ್ನು ಹಂಚಿಕೊಂಡ ಸುವಿಜ್ಞಾ ಶರ್ಮಾ, “ಅನಂತ್ ಅಂಬಾನಿ ಶಾರುಖ್‌ಗೆ ಸುಮ್ಮನಿರುವಂತೆ ಸೂಚಿಸಿದ್ದಾರೆ” ಎಂಬ ಅರ್ಥ ಬರುವಂತೆ ಸುಳ್ಳು ಕ್ಯಾಪ್ಶನ್ ಬರೆದಿದ್ದರು. ಇದರಿಂದ ಸಂಭಾಷಣೆಯ ಮೂಲ ಉದ್ದೇಶವೇ ಬದಲಾಗಿ, ಶಾರುಖ್ ಅವರ ಸಾರ್ವಜನಿಕ ಇಮೇಜ್‌ಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ ಎಂದು ನೋಟಿಸ್‌ನಲ್ಲಿ ಗಂಭೀರವಾಗಿ ಆಕ್ಷೇಪಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 356ರ ಅಡಿಯಲ್ಲಿ ಈ ಮಾನನಷ್ಟ ನೋಟಿಸ್ ಜಾರಿ ಮಾಡಲಾಗಿದೆ. ಯಾವುದೇ ಆಧಾರವಿಲ್ಲದೆ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಮತ್ತು ಹಾನಿಕಾರಕ ಮಾಹಿತಿ ಹಂಚುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಲಾಗಿದೆ. ನೋಟಿಸ್ ತಲುಪಿದ 48 ಗಂಟೆಗಳ ಒಳಗಾಗಿ ವಿವಾದಾತ್ಮಕ ಇನ್‌ಸ್ಟಾಗ್ರಾಮ್ ರೀಲ್ ಮತ್ತು ಸುಳ್ಳು ಕ್ಯಾಪ್ಶನ್‌ಗಳನ್ನು ಡಿಲೀಟ್ ಮಾಡಬೇಕು, ಮುಂದೆಂದೂ ಇಂತಹ ಸುಳ್ಳು ಸುದ್ದಿ ಹಾಕಬಾರದು, ಮೂಲ ವಿಡಿಯೋ ಹಾಗೂ ಪೋಸ್ಟ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟು ಲಿಖಿತ ದೃಢೀಕರಣ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವಿವಾದಗಳ ನಡುವೆಯೂ ಶಾರುಖ್ ಖಾನ್ ತಮ್ಮ ಮುಂದಿನ ದೊಡ್ಡ ಸಿನಿಮಾ ‘ಕಿಂಗ್’ ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಕ್ರಿಸ್‌ಮಸ್ ಹಬ್ಬದ ವೇಳೆ ತೆರೆಗೆ ಬರಲಿರುವ ಈ ಆಕ್ಷನ್ ಚಿತ್ರದಲ್ಲಿ ಶಾರುಖ್ ಮೊದಲ ಬಾರಿಗೆ ತಮ್ಮ ಪುತ್ರಿ ಸುಹಾನಾ ಖಾನ್ ಜೊತೆ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ಅವರಂತಹ ಘಟಾನುಘಟಿ ಕಲಾವಿದರು ನಟಿಸಿರುವುದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ.



