ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟ್ಯಂತರ ಭಕ್ತರ ಆರಾಧ್ಯ ದೈವ ಕೇರಳದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಭಾಗದಲ್ಲಿ ಮೊಬೈಲ್ ಫೋನ್ ಬಳಸಿ ಫೋಟೋ ಮತ್ತು ವಿಡಿಯೋ ತೆಗೆಯುವವರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಸಾಮಾಜಿಕ ಜಾಲತಾಣಗಳ ಹುಚ್ಚಿಗೆ ಬಿದ್ದು ದೇವಾಲಯದ ಪಾವಿತ್ರ್ಯತೆ ಮತ್ತು ಭದ್ರತೆಗೆ ಧಕ್ಕೆ ತರುವವರನ್ನು ತಕ್ಷಣವೇ ಬಂಧಿಸಲು ಹಾಗೂ ಅವರ ಮೊಬೈಲ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೇರಳ ಪೊಲೀಸರು ಮತ್ತು ದೇವಸ್ವಂ ಮಂಡಳಿ ನಿರ್ಧರಿಸಿದೆ.
ಕೇರಳ ಹೈಕೋರ್ಟ್ ಆದೇಶದಂತೆ ಶಬರಿಮಲೆ ಗರ್ಭಗುಡಿ, ಪವಿತ್ರ ಹದಿನೆಂಟು ಮೆಟ್ಟಿಲುಗಳು, ಮೇಲ್ತಿರುಮುಟ್ಟಂ ಮತ್ತು ಮಾಳಿಗಪುರಂ ದೇವಿ ಸನ್ನಿಧಿಯಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ, ಕೆಲವು ಯೂಟ್ಯೂಬರ್ಗಳು ಮತ್ತು ವ್ಲಾಗರ್ಗಳು ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಲು ಹೊಸ ತಂತ್ರ ಹೂಡಿದ್ದಾರೆ. ಶರ್ಟ್ ಜೇಬು, ಬ್ಯಾಗ್ ಮತ್ತು ಹೇರ್ ಬ್ಯಾಂಡ್ಗಳಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡು ರಹಸ್ಯವಾಗಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ. ಬಳಿಕ ಆ ದೃಶ್ಯಗಳನ್ನು ಎಡಿಟ್ ಮಾಡಿ ಲೈಕ್ಸ್ ಮತ್ತು ಶೇರ್ಗಳಿಗಾಗಿ ಯೂಟ್ಯೂಬ್, ವಾಟ್ಸಾಪ್ಗಳಲ್ಲಿ ಹರಿಬಿಡುತ್ತಿರುವುದು ದೇವಸ್ವಂ ವಿಜಿಲೆನ್ಸ್ ತನಿಖೆಯಿಂದ ಬಯಲಾಗಿದೆ.
ದೇವಾಲಯದ ಒಳಗಿನ ಸೂಕ್ಷ್ಮ ಪ್ರದೇಶಗಳ ವಿಡಿಯೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿರುವುದು ಭದ್ರತಾ ಪಡೆಗಳ ಆತಂಕಕ್ಕೆ ಕಾರಣವಾಗಿದೆ. ಈ ರಹಸ್ಯ ವಿಡಿಯೋಗಳನ್ನು ಸಮಾಜವಿರೋಧಿ ಶಕ್ತಿಗಳು ಮತ್ತು ಉಗ್ರಗಾಮಿ ಗುಂಪುಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ ರವಾನಿಸಿದೆ. ದೇವಾಲಯದ ಭದ್ರತಾ ವ್ಯವಸ್ಥೆಯ ಮಾಹಿತಿ ಶತ್ರುಗಳ ಕೈಸೇರುವ ಅಪಾಯವಿರುವುದರಿಂದ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ.
ಗುಪ್ತಚರ ವರದಿಯ ಬೆನ್ನಲ್ಲೇ ಸನ್ನಿಧಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ದುಪ್ಪಟ್ಟುಗೊಳಿಸಲಾಗಿದೆ. ಅನುಮಾನಾಸ್ಪದವಾಗಿ ಮೊಬೈಲ್ ಹಿಡಿದು ಓಡಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಭಕ್ತರು ದೇವಾಲಯದ ನಿಯಮಗಳನ್ನು ಪಾಲಿಸಿ, ಕೇವಲ ದೈವ ದರುಶನಕ್ಕೆ ಮಾತ್ರ ಆದ್ಯತೆ ನೀಡಬೇಕು. ನಿಯಮ ಮೀರಿ ಕ್ಯಾಮೆರಾ ಬಳಸಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.



