Monday, September 29, 2025

ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಬಾಲಿವುಡ್‌ ಬಾಲ ಕಲಾವಿದ, ಸಹೋದರ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಕೋಟಾದಲ್ಲಿ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಾಲಿವುಡ್‌, ಕಿರುತೆರೆಯ ಬಾಲನಟ 10 ವರ್ಷದ ಬಾಲಕ ಮತ್ತು ಆತನ 15 ವರ್ಷದ ಸಹೋದರ ಮೃತಪಟ್ಟಿದ್ದಾರೆ.

ಮೃತರನ್ನು ನಟಿ ರೀಟಾ ಶರ್ಮಾ ಅವರ ಮಕ್ಕಳಾದ ವೀರ್‌ ಶರ್ಮಾ ಮತ್ತು ಶೌರ್ಯ ಶರ್ಮಾ ಎಂದು ಗುರುತಿಸಲಾಗಿದೆ.

ಘಟನೆ ವೇಳೆ ಮಕ್ಕಳ ಪೋಷಕರಾದ ರೀಟಾ ಶರ್ಮಾ ಮತ್ತು ಜಿತೇಂದ್ರ ಶರ್ಮಾ ಮನೆಯಲ್ಲಿರಲಿಲ್ಲ.

ರಾತ್ರಿ ಮನೆಯೊಳಗಿನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಧಾವಿಸಿ ಬಂದಾಗ ಮಕ್ಕಳಿಬ್ಬರು ಅಸುನೀಗಿದ್ದರು. ಈ ವೇಳೆ ಕಾರ್ಯ ನಿಮಿತ್ತ ರೀಟಾ ಮುಂಬೈಗೆ ತೆರಳಿದ್ದರೆ ಜಿತೇಂದ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಗಡೆ ಹೋಗಿದ್ದರು. ಮನೆಯಲ್ಲಿ ಮಕ್ಕಳಿಬ್ಬರೇ ಇದ್ದರು ಎನ್ನಲಾಗಿದೆ. ಹೊಗೆಯಿಂದ ಉಸಿರುಗಟ್ಟಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಬಾಲಕ ಲಕ್ಷ್ಮಣ ಪಾತ್ರದಲ್ಲಿ ಮಿಂಚಿದ್ದ ವೀರ್‌
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ ‘ವೀರ್‌ ಹನುಮಾನ್‌’ನಲ್ಲಿ ವೀರ್‌ ಬಾಲಕ ಲಕ್ಷ್ಮಣ ಪಾತ್ರ ನಿರ್ವಹಿಸಿದ್ದ. ಹಿಂದಿ ಚಿತ್ರವೊಂದರಲ್ಲಿ ಸೈಫ್‌ ಆಲಿ ಖಾನ್‌ ಅವರ ಬಾಲ್ಯದ ಪಾತ್ರದಲ್ಲಿ ನಟಿಸುತ್ತಿದ್ದ. ಜತೆಗೆ ಕೆಲವು ರಾಜಸ್ಥಾನಿ ಆಲ್ಬಂ ಹಾಡಿನಲ್ಲೂ ಕಾಣಿಸಿಕೊಂಡಿದ್ದ. ಈತನ ಸಹೋದರ ಶೌರ್ಯ ಶರ್ಮಾ ಐಐಟಿ ಎಂಟ್ರಸ್‌ ಪರೀಕ್ಷೆಯ ಸಿದ್ಧತೆಯಲ್ಲಿದ್ದ ಎನ್ನಲಾಗಿದೆ.