ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಸೈಬರ್ ಅಪರಾಧಗಳ ಸಂಖ್ಯೆ ನಗರದಲ್ಲಿ ಹೆಚ್ಚುತ್ತಿದೆ. ಖ್ಯಾತ ವ್ಯಕ್ತಿಗಳು ಮಾತ್ರವಲ್ಲದೆ ಸಾಮಾನ್ಯ ನಾಗರಿಕರೂ ಆನ್‌ಲೈನ್ ವಂಚನೆಗೆ ಸಿಲುಕುತ್ತಿರುವ ಘಟನೆಗಳು ಸಂಭವಿಸುತ್ತಿವೆ. ಬೆಂಗಳೂರಿನಲ್ಲಿ ಜಂಟಿ ಸೈಬರ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಎರಡು ಕೇಸ್ ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇಬ್ಬರೂ ವಿಭಿನ್ನ ಹಿನ್ನಲೆ ಹೊಂದಿದ್ದು, ಒಬ್ಬರು ಇಂಜಿನಿಯರ್, ಮತ್ತೊಬ್ಬರು ಖಾಸಗಿ ಸಂಸ್ಥೆಯ ಉದ್ಯೋಗಿ. ಕಳೆದ ಕೆಲವು ತಿಂಗಳುಗಳಲ್ಲಿ ಇಬ್ಬರೂ ಒಟ್ಟು 2.28 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದ್ದಾರೆ.
ಇಂಜಿನಿಯರ್ ಗೆ 1.40 ಕೋಟಿ ರೂ. ನಷ್ಟ:
ರಾಮಮೂರ್ತಿ ನಗರದ ನಿವಾಸಿ ರಾಮನಾಥ್ ಎಸ್ (ಹೆಸರು ಬದಲಾಯಿಸಲಾಗಿದೆ), ಇಂಜಿನಿಯರ್, ಕಳೆದ 10 ವರ್ಷಗಳಿಂದ ಹಣ ಹೂಡಿಕೆ ಮಾಡುತ್ತಿದ್ದವರು. 2024 ಡಿಸೆಂಬರ್‌ನಲ್ಲಿ ವಾಟ್ಸಾಪ್ ಮೂಲಕ ರಾಣಿ ಸಾಹ ಎಂಬ ಮಹಿಳೆಯ ಪರಿಚಯ ಹೊಂದಿದ್ದರು. ಆಕೆ ತನ್ನನ್ನು ಆನ್‌ಲೈನ್ ಹೂಡಿಕೆ ಮೂಲಕ ಕೋಟ್ಯಾಧಿಪತಿಯಾಗಿದ್ದಂತೆ ಪರಿಚಯಿಸಿ, ರಾಮನಾಥ್ ಅವರನ್ನು ವಿವಿಧ ಗ್ರೂಪ್ಗಳಿಗೆ ಸೇರಿಸಿ ಹಣ ಹೂಡಲು ಪ್ರೇರಣೆ ಮಾಡಿದರು. ನಂತರ ಕ್ಯಾಂಬ್ರಿಡ್ಜ್ ಯೂನಿವರ್ಸಿಟಿಯ ದಿವಾಕರ್ ಎಂಬ ವ್ಯಕ್ತಿಯ ಪರಿಚಯ ಮಾಡಿ 10 ತಿಂಗಳ ಅವಧಿಯಲ್ಲಿ ರಾಮನಾಥ್ ತಮ್ಮ ಖಾತೆಗೆ 1.40 ಕೋಟಿ ರೂ.ಗಳಷ್ಟು ಹಣ ವರ್ಗಾಯಿಸಿದರು. ಆದರೆ ಲಾಭ ಪಡೆಯಲು ಹೋದಾಗ ಪ್ರತಿಯೊಬ್ಬ ಹಂತದಲ್ಲಿ “ಸರ್ವಿಸ್ ಚಾರ್ಜ್” ಹೆಸರಿನಲ್ಲಿ ಹೆಚ್ಚುವರಿ ಹಣ ಪಾವತಿಸುವಂತೆ ಕೇಳಲಾಗುತ್ತಿತ್ತು. ಶಂಕೆ ಹುಟ್ಟಿದ ರಾಮನಾಥ್ ತಮ್ಮ ಸ್ನೇಹಿತರೊಂದಿಗೆ ವಿಚಾರಿಸಿಕೊಂಡಾಗ ವಂಚನೆ ಮಾಹಿತಿ ತಿಳಿದು ಬಂದಿದೆ.
ಖಾಸಗಿ ಸಂಸ್ಥೆಯ ಉದ್ಯೋಗಿಗೆ 88 ಲಕ್ಷ ರೂ. ನಷ್ಟ:
ಬಾಣಸವಾಡಿಯ ನಿವಾಸಿ, ಖಾಸಗಿ ಸಂಸ್ಥೆಯ ಉದ್ಯೋಗಿ ಸನತ್ ಪಿ (ಹೆಸರು ಬದಲಾಯಿಸಲಾಗಿದೆ) 2025 ರ ಜೂನ್‌ನಿಂದ ಸೆಪ್ಟೆಂಬರ್ ತನಕ 88.36 ಲಕ್ಷ ರೂಪಾಯಿಗಳಷ್ಟು ಹಣ ಕಳೆದುಕೊಂಡಿದ್ದಾರೆ. ಸೈಬರ್ ಅಪರಾಧಿಗಳು ಅವರೊಂದಿಗೆ ನಕಲಿ ಟ್ರೇಡಿಂಗ್ ಆ್ಯಪ್ ಹಂಚಿಕೊಂಡು, ಹೂಡಿಕೆ ನಡೆದಂತೆ ತೋರಿಸಿ ಅವರು ಹೆಚ್ಚು ಹಣ ಹೂಡಲು ಪ್ರೇರೇಪಿಸಿದ್ದರು. ಅನೇಕ ಪ್ರಯತ್ನದ ನಂತರವೂ ಹಣವನ್ನು ಹಿಂಪಡೆಯಲು ವಿಫಲವಾದ ಸನತ್, ವಂಚನೆ ನಡೆದಿದೆ ಎಂದು ಅರಿತು ಸೈಬರ್ ಪೊಲೀಸರ ಬಳಿ ದೂರು ನೀಡಿದ್ದಾರೆ.