July 25, 2026
Saturday, July 25, 2026
spot_img

ಆಮೇಲೆ ಬೇಕಾಗತ್ತೆ ಅಂತ ನಾಲ್ಕು ಸಾವಿರ ಲೀಟರ್‌ ಡೀಸೆಲ್‌ ಸಂಗ್ರಹಿಸಿಟ್ಟಿದ್ದ ವ್ಯಕ್ತಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್‌ -ಇಸ್ರೇಲ್‌ ಯುದ್ಧದಿಂದಾಗಿ ಇಂಧನ ಬೆಲೆ ಏರಿಕೆಯಾಗುತ್ತದೆ ಎಂದು ಮುಂಚಿತವಾಗಿಯೇ ನಾಲ್ಕು ಸಾವಿರ ಲೀಟರ್‌ ಡೀಸೆಲ್‌ನ್ನು ಅಕ್ರಮವಾಗಿ ಸಂಗ್ರಹಿಸಿದ್ದ ವ್ಯಕ್ತಿಯನ್ನು ಬೆಳ್ತಂಗಡಿಯಲ್ಲಿ ಬಂಧಿಸಲಾಗಿದೆ.

ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಕಣಿಯೂರು ಗ್ರಾಮದ ಮುಡಲ್ತಿಯಾರ್‌ನಲ್ಲಿ ದಾಳಿ ನಡೆಸಿದ ವೇಳೆ ಜಗದೀಶ್‌ ಎನ್ನುವವರು ಡೀಸೆಲ್‌ ಸಂಗ್ರಹಿಸಿ ಇಟ್ಟಿರುವುದು ಪತ್ತೆಯಾಗಿದೆ.

ಜಗದೀಶ್‌ ಮನೆಯ ಸಮೀಪ ಇರುವ ಶೆಡ್‌ನಲ್ಲಿ ಡೀಸೆಲ್‌ ಸ್ಟೋರ್‌ ಆಗಿತ್ತು. ದೊಡ್ಡ ದೊಡ್ಡ ಕ್ಯಾನ್‌ ಹಾಗೂ ಡ್ರಮ್‌ಗಳಲ್ಲಿ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ಕಂಡುಬಂದಿದೆ.

ಪರಿಶೀಲನೆಯ ವೇಳೆ, 200 ಲೀಟರ್ ಸಾಮರ್ಥ್ಯದ 20 ಡ್ರಮ್‌ಗಳಲ್ಲಿ ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ ಐದು ಕ್ಯಾನ್‌ಗಳಲ್ಲಿ ಒಟ್ಟು 4,175 ಲೀಟರ್ ಡೀಸೆಲ್ ಸಂಗ್ರಹಿಸಿದ್ದನ್ನು ಅಧಿಕಾರಿಗಳು ಪತ್ತೆಹಚ್ಚಿದರು. ಹಲವಾರು ಖಾಲಿ ಡ್ರಮ್‌ಗಳು ಮತ್ತು ಕ್ಯಾನ್‌ಗಳನ್ನೂ ಸ್ಥಳದಲ್ಲಿ ಪತ್ತೆಹಚ್ಚಲಾಯಿತು. ವಶಪಡಿಸಿಕೊಂಡ ಡೀಸೆಲ್‌ನ ಮೌಲ್ಯ ಸುಮಾರು 3.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ವಿಚಾರಣೆ ವೇಳೆ ಅವರು ಸುಮಾರು ಒಂದು ವಾರದ ಹಿಂದೆ ಸ್ನೇಹಿತನ ಬಳಿಯಿಂದ ಡೀಸೆಲ್ ಖರೀದಿಸಿ ವಾಣಿಜ್ಯ ಉದ್ದೇಶಕ್ಕಾಗಿ ಸಂಗ್ರಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅವರ ಬಳಿ ಲಾರಿ ಮತ್ತು ಎಕ್ಸ್ಕಾವೇಟರ್ ಇರುವುದಾಗಿ ತಿಳಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !